ಕಲಬುರಗಿ: ಗ್ರಾಮ ಪಂಚಾಯತ್ಗೆ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾದರೆ ಅಂತಹ ಗ್ರಾಮ ಪಂಚಾಯತ್ಗಳಿಗೆ ಒಂದು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಘೋಷಿಸಿದೆ.
ಚುನಾವಣೆಯಿಂದ ಗ್ರಾಮಗಳಲ್ಲಿ ಉಂಟಾಗುವ ಅಶಾಂತಿ, ಚುನಾವಣಾ ಆಯೋಗದ ದುಂದುವೆಚ್ಚ ತಪ್ಪಿಸಲು ಮತ್ತು ಯುವ ಸಮುದಾಯಕ್ಕೆ ಮಾದರಿಯಾಗಲು ಈ ಯೋಜನೆ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನದ ಕ್ಷೇತ್ರವ್ಯಾಪ್ತಿ ಚಿಕ್ಕದಾಗಿರುತ್ತದೆ. ಹೀಗಾಗಿ ರಾಜಕೀಯ ವೈಷಮ್ಯ ಹೆಚ್ಚಾಗಿ ಬೆಳೆಯುತ್ತದೆ. ಹಲ್ಲೆ, ಕೊಲೆಯಂತಹ ಘಟನೆಗಳು ನಡೆದಿರುವ ನಿದರ್ಶನಗಳೂ ಇವೆ. ಹೀಗಾಗಿ ತ್ವೇಷಮಯ ವಾತಾವರಣ ಬಿಟ್ಟು ಸಹೋದರತ್ವ ಬೆಳೆಸುವ ಸಲುವಾಗಿ, ಶಾಂತಿ ಸ್ನೇಹದಿಂದ ಅವಿರೋಧ ಆಯ್ಕೆ ಮಾಡಿ ಇತರರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಇಂತಹದೊಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದಾರೆ.
ಓದಿ: ಚಕ್ಕಡಿ ಏರಿ ಪ್ರತಿಭಟನೆ: ಧಾರವಾಡದಲ್ಲಿ ಬಂದ್ಗೆ ಒಳ್ಳೆಯ ಪ್ರತಿಕ್ರಿಯೆ
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿ 6 ಜಿಲ್ಲೆಯ 1,400 ಗ್ರಾಮ ಪಂಚಾಯತ್ಗೆ ಕೆಕೆಆರ್‌ಡಿಬಿ ಈ ಆಫರ್ ಅನ್ವಯವಾಗಲಿದೆ. ಎಲ್ಲಾ ಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ಗ್ರಾಮ ಪಂಚಾಯತ್ಗಳಿಗೆ ವರ್ಷಕ್ಕೆ 20 ಲಕ್ಷದಂತೆ ಐದು ವರ್ಷಗಳಲ್ಲಿ ಒಂದು ಕೋಟಿ ರೂ ಹೆಚ್ಚುವರಿ ಅನುದಾನ ನೀಡಲಾಗುತ್ತದೆ.