ಕಲಬುರಗಿ:ಕರ್ನಾಟಕ ನಗರ ಕುಡಿವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಾಂತರಾಜ್ ಹಾಗೂ ಎಲ್ ಅಂಡ್ ಟಿ ಕಂಪನಿ ಅಧಿಕಾರಿ ಸಂಜಯ್ ಅವರನ್ನು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಾನಗರ ಪಾಲಿಕೆ, ನಗರಾಭಿವೃದ್ದಿ ಇಲಾಖೆ ಹಾಗೂ ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮಂಡಳಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಉಸ್ತುವಾರಿ ಸಚಿವರು, ಸರ್ಕಾರದ ದ್ರಾಕ್ಷಿ, ಗೋಡಂಬಿ ತಿನ್ನಲು ಬಂದಿದ್ದೀರಾ? ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಾಂತರಾಜ್ ಹಾಗೂ ಎಲ್ ಅಂಡ್ ಟಿ ಕಂಪನಿಯ ಅಧಿಕಾರಿ ಸಂಜಯ್ ಅವರು ಪೈಪ್ ಲೈನ್ ಗಾಗಿ ನೆಲ ಅಗೆದು ಹಾಗೆಯೇ ಬಿಟ್ಟಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಟೆಕ್ಸ್ ಮೊ ಕಂಪನಿಯ ಎಚ್ ಡಿಪಿ ಪೈಪ್ ನ ಸಾಮರ್ಥ್ಯದ ಬಗ್ಗೆ ಮೈಸೂರಿನ ಸಿಪೆಟ್ ಸಂಸ್ಥೆಯು ವರದಿ ನೀಡಿದೆ. ಉತ್ತಮ ಗುಣಮಟ್ಟ ಹೊಂದಿಲ್ಲ ಎಂದಿದೆ. ಆದರೂ ಅದೇ ಕಂಪನಿಯ ಪೈಪ್ ಅಳವಡಿಸಿದ್ದೇಕೆ ? ಈ ಕುರಿತಾದ ಸೆಪೆಟ್ ವರದಿಗಳು ನಿಮ್ಮ ಬಳಿ ಇವೆಯಾ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂತರಾಜ, ಹೈಡ್ರೊ ಟೆಸ್ಟಿಂಗ್ ಮಾಡುತ್ತಿರುವುದರಿಂದ ಅಗೆದ ನೆಲ ಮುಚ್ಚಿಲ್ಲ ಎಂದು ಉತ್ತರ ನೀಡಿದರು.
ಆಗ ಮಧ್ಯೆ ಪ್ರವೇಶ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ, 120 ಕಿ.ಮೀ. ಪೈಪ್ ಲೈನ್ ಅಳವಡಿಸಿದರೂ ಕೇವಲ 2 ಕಿ ಮೀ ಮಾತ್ರ ಹೈಡ್ರೊ ಟೆಸ್ಟಿಂಗ್ ಆಗಿದೆ ಎಂದರೆ ಹೇಗೆ? ಟೆಸ್ಟಿಂಗ್ ಆಗದೇ ಅಷ್ಟು ಉದ್ದದವರೆಗೆ ಪೈಪ್ ಹಾಕಲು ಅನುಮತಿ ಏಕೆ ಕೊಟ್ಟಿರಿ ? ಸಾರ್ವಜನಿಕರ ಸಮಸ್ಯೆ ನಿವಾರಿಸಲು ಎಲ್ & ಟಿ ಸ್ಪಂದನಾ ತಂಡ ರಚಿಸಬೇಕು. ಪ್ರಸ್ತುತ ಮಳೆಗಾಲ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಕಾಮಗಾರಿ ಪ್ರಗತಿ ಕುರಿತು ಸ್ಥಳೀಯ ಶಾಸಕರೊಂದಿಗೆ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
700 ಕಾರ್ಮಿಕರ ಬದಲಾಗಿ 300 ಕಾರ್ಮಿಕರಿಂದ ಕುಡಿಯುವ ನೀರು ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ಆಮೆ ಗತಿ ಸಾಗುತ್ತಿದೆ. ಕಾಮಗಾರಿಯು ನಿಧಾನಗತಿಗೆ ಕಾರಣ ಕೇಳಿ ಕೂಡಲೆ ಎಲ್ & ಟಿ ಕಂಪನಿಗೆ ನೋಟಿಸ್ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರಿಗೆ ಸೂಚಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಾಮಗಾರಿ ವೇಗ ಪಡೆದುಕೊಳ್ಳದಿದ್ದಲ್ಲಿ ಎಲ್ & ಟಿ ಕಂಪನಿಂದ ಗುತ್ತಿಗೆ ಹಿಂಪಡೆದು ಬೇರೆಯವರಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಖರ್ಗೆ ಅಸಮಾಧಾನ: ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಕಮೀಷನರ್ ಭುವನೇಶ ಪಾಟೀಲ ಕುರಿತು, ನೀವು ಕಮಿಷನರ್ ಇದ್ದೀರಾ? ಅಧಿಕಾರಿಗಳು ಯಾಕೆ ಕೆಲಸ ಮಾಡುತ್ತಿಲ್ಲ ಗೊತ್ತಿಲ್ಲ ಎಂದರೆ ಹೇಗೆ ? ನಿಮಗೆ ಸರ್ಕಾರ ಎಲ್ಲ ಸವಲತ್ತು ನೀಡಿದೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಹವರ ವಿರುದ್ದ ಕ್ರಮ ಕೈಗೊಳ್ಳಿ. ಕಷ್ಟಪಟ್ಟು ವಿಶ್ವಬ್ಯಾಂಕ್ನಿಂದ ಸಾಲ ತಂದರೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಜಾರಿ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತು ಮುಂದುವರೆಸಿ, ಎಲ್ ಟಿ ಕಂಪನಿ ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಿರ್ಹವಣೆ ಜವಾಬ್ದಾರಿ ಹೊತ್ತಿಕೊಂಡಿದೆ. ಬೆಳಗಾವಿಯ ಕಾಮಗಾರಿಯಲ್ಲಿ ಅಳವಡಿಸುತ್ತಿರುವ ಟೆಕ್ಸ್ಮೋ ಪೈಪ್ ಕಳಪೆ ಮಟ್ಟದಿಂದ ಕೂಡಿದೆ ಎಂದು ಅಲ್ಲಿನ ಥರ್ಡ್ ಪಾರ್ಟಿ ಎಸ್ಎಂಇಸಿ ಮೈಸೂರಿನ ಸಿಪೆಟ್ ಸಂಸ್ಥೆಗೆ ವರದಿ ನೀಡಿದೆ. ಆದರೆ ಅದೇ ಸಂಸ್ಥೆ ಇಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಹಾಗಾದರೆ ಇಲ್ಲಿ ಅಳವಡಿಸುವ ಪೈಪ್ ಲೈನ್ ಗತಿ ಏನು ಎಂದು ಕೆ.ಯು.ಐ.ಎಫ್.ಡಿ.ಸಿ. ಕಾರ್ಯನಿರ್ವಾಹಕ ಅಭಿಯಂತರ ಕಾಂತರಾಜು ಅವರನ್ನು ಪ್ರಶ್ನಿಸಿದರು. ಪೈಪ್ ಲೈನ್ ಗುಣಮಟ್ಟ ಪರಿಶೀಲನೆಗೆ ಹೈದರಾಬಾದಿಗೆ ಕಳುಹಿಸಿಕೊಡಲಾಗಿದೆ ಎಂದು ಕಾಂತರಾಜು ಮಾಹಿತಿ ನೀಡಿದರು.
ತುರ್ತು ಸ್ಪಂದನಾ ತಂಡ ರಚಿಸಿ: ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೂಡಲೇ ಎಲ್ & ಟಿ ಅಳವಡಿಸುತ್ತಿರುವ ಪೈಪ್ ಗುಣಮಟ್ಟದ ಕುರಿತು ಪರಿಶೀಲಿಸಬೇಕು. ಪೈಪ್ ಲೈನ್ ಗುಣಮಟ್ಟ ಅರಿವಿಲ್ಲದೇ 120 ಕಿ.ಮೀ ಪೈಪ್ ಲೈನ್ ಅಳವಡಿಸಿದ್ದು ಮತ್ತು ಇದರಲ್ಲಿ 2 ಕಿ.ಮೀ ನೀರಿನ ಪರೀಕ್ಷೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಸಮಸ್ಯೆ ನಿವಾರಿಸಲು ಎಲ್ & ಟಿ ಸ್ಪಂದನಾ ತಂಡ ರಚಿಸಬೇಕು. ಪ್ರಸ್ತುತ ಮಳೆಗಾಲ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಕಾಮಗಾರಿ ಪ್ರಗತಿ ಕುರಿತು ಸ್ಥಳೀಯ ಶಾಸಕರೊಂದಿಗೆ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜುಲೈ 15ಕ್ಕೆ ಬರಗಾಲ ಘೋಷಣೆ ಬಗ್ಗೆ ತೀರ್ಮಾನ: ರಾಜ್ಯದಲ್ಲಿ ಮುಂಗಾರು ಮಳೆ ಅಭಾವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ಬರುವ ಜುಲೈ 15ಕ್ಕೆ ಸಭೆ ನಡೆಯಲಿದೆ. ಅಲ್ಲಿ ಬರಗಾಲ ಘೋಷಣೆ ಮಾಡಬೇಕೆ ಅಥವಾ ಇಲ್ಲ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
2.50 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಕ್ರಮ:ಚುನಾವಣೆ ಪೂರ್ವ ನಮ್ಮ ಪಕ್ಷ ಪ್ರಾಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಂತ ಹಂತವಾಗಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇನ್ನು ಶಿಕ್ಷಕರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂಓದಿ: ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ..