ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ಶಾಕ್‌ನಿಂದ ಅವರ ಪುತ್ರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಇನ್ನೂ ಹೊರಬಂದಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ್ ವ್ಯಂಗ್ಯವಾಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ತಿರುಗೇಟು ನೀಡುವ ಭರದಲ್ಲಿ ಶನಿವಾರ ಪ್ರಿಯಾಂಕ್ ಖರ್ಗೆ, ಎಲ್ಲಾ ಬಾರ್ಗಳಿಗೂ ವಾಜಪೇಯಿ ಹೆಸರಿಡುತ್ತೀರಾ? ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾಧವ್, ಪ್ರಿಯಾಂಕ್ ಖರ್ಗೆ ಅವರು ತಂದೆಯ ಸೋಲಿನ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ವಾಜಪೇಯಿ ಅವರು ದೇಶ ಕಂಡ ಅಪ್ರತಿಮ ನಾಯಕ. ಅಂತವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ, ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೀವು 'ವಾಜಪೇಯಿ ಬಾರ್' ಅಂತಾ ಬೋರ್ಡ್ ಹಾಕುತ್ತೀರಾ?: ಸಿ.ಟಿ. ರವಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಸಂಸದ ಡಾ. ಉಮೇಶ್ ಜಾಧವ್‌ಗೆ ಏನೇ ಪ್ರಶ್ನೆ ಮಾಡಿದ್ರೂ ಅವರ ಚೇಲಾಗಳು ಉತ್ತರ ಕೊಡ್ತಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಚೇಲಾಗಳನ್ನು ಯಾರು ಇಟ್ಟಿರುತ್ತಾರೋ ಅವರ ಬಾಯಿಂದ ಮಾತ್ರ ಇಂತಹ ಮಾತುಗಳು ಬರುತ್ತವೆ. ನನ್ನ ಹತ್ತಿರ ಇರುವವರು ಕೇವಲ ನನ್ನ ಕಾರ್ಯಕರ್ತರು. ನಾನು ಸದಾ ಜನರ ಸೇವಕ, ಜನರ ಚೇಲಾ. ಪ್ರಿಯಾಂಕ್ ಖರ್ಗೆ ಹೇಳುವ ಚಾಲೆಂಜ್‌ಗೆ ನಾನು ರೆಡಿ ಎಂದು ಸವಾಲು ಹಾಕಿದರು.
ಸಿ.ಟಿ ರವಿ ನೆಹರು ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಈ ವಿಚಾರ ಗೊತ್ತಿಲ್ಲ, ನಾನು ದೆಹಲಿಯಲ್ಲಿದ್ದೆ. ಯಾರೇ ಆಗಲಿ ಮಾತನಾಡುವ ಮುನ್ನ ಒಮ್ಮೆ ಯೋಚನೆ ಮಾಡಬೇಕು ಎಂದು ಹೇಳಿದ್ರು.