ಕಲಬುರಗಿ: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಕುಟುಂಬದ ಸದಸ್ಯರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಾಧವ್ ಮತ್ತು ಅವರ ಕುಟುಂಬದ ಸದಸ್ಯರು ಈಗ ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಹೋಂ ಕ್ವಾರಂಟೈನ್ ಮುಂದುವರೆಸಿದ್ದಾರೆ. ಅವರ ಆಪ್ತ ಸಿಬ್ಬಂದಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸೋಂಕಿನಿಂದ ಬಳಲುತ್ತಿರುವವರ ಯೋಗಕ್ಷೇಮಕ್ಕಾಗಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ.
ಇಂತಹ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿವಾರಿಸಲು ಸಿಎಂ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಇಡೀ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲರೂ ತಮ್ಮ ಅತ್ಯುತ್ತಮ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಸರ್ಕಾರಿ ಆಸ್ಪತ್ರೆಗಳು ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಮ್ಮಿ ಇಲ್ಲ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದಿದ್ದಾರೆ.