ಕಲಬುರಗಿ: ಊರು ಎಂದಮೇಲೆ ದೇವಸ್ಥಾನಗಳು ಇರೋದು ಸರ್ವೆ ಸಾಮಾನ್ಯ. ಪುಟ್ಟ ಹಳ್ಳಿಯಲ್ಲಿ ನಾಲ್ಕೈದು ದೇವಸ್ಥಾನಗಳಿದ್ದರೆ ದೊಡ್ಡ ಸಂಗತಿ. ಆದರೆ ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನಗಳಿವೆ. ವರ್ಷಪೂರ್ತಿ ಪ್ರತಿ ತಿಂಗಳು ಇಲ್ಲಿ ಜಾತ್ರಾ ಮಹೋತ್ಸವಗಳು ನೆರವೇರುತ್ತಲೇ ಇರುವುದು ಇಲ್ಲಿನ ವಿಶೇಷತೆಯಾಗಿದೆ.
ಹೌದು, ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮವನ್ನು ದೇವಸ್ಥಾನಗಳ ತವರೂರು ಎಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಅಲ್ಲಮಪ್ರಭು, ಅಮೋಘಸಿದ್ದ, ಶಂಕರಲಿಂಗ ಹೀಗೆ ನೂರಕ್ಕೂ ಅಧಿಕ ದೇವಸ್ಥಾನಗಳು ಇಲ್ಲಿವೆ. ಅಷ್ಟೇ ಅಲ್ಲ ಗ್ರಾಮದಲ್ಲಿ ಚಾಲುಕ್ಯರ ಕಾಲದ ದೇವಸ್ಥಾನಗಳನ್ನು ಕೂಡ ಕಾಣಬಹುದಾಗಿದೆ. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿ ಜನಾಂಗದ ದೇವಸ್ಥಾನಗಳು ಗ್ರಾಮದಲ್ಲಿದ್ದು, ಪ್ರತಿ ದೇವಸ್ಥಾನಕ್ಕೂ ಭಕ್ತರು ಜಾತಿ, ಧರ್ಮ ಬೇಧಭಾವವಿಲ್ಲದೆ ಸೌಹಾರ್ದತೆಯಿಂದ ಆಗಮಿಸುತ್ತಾರೆ.
ಮಾಡಿಯಾಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನಗಳಿರೋದರಿಂದ ವರ್ಷಪೂರ್ತಿ ಜಾತ್ರೆಯ ಸಂಭ್ರಮ ಕಳೆಗಟ್ಟಿರುತ್ತದೆ. ಪ್ರತಿ ತಿಂಗಳು ಒಂದಿಲ್ಲೊಂದು ದೇವಸ್ಥಾನದ ಜಾತ್ರಾ ಮಹೋತ್ಸವ ನೆರವೇರಿತ್ತಲೇ ಇರುತ್ತವೆ. ಭಾವೈಕ್ಯತೆಯ ಸಂಕೇತವನ್ನು ಸಾರುವ ಅಲ್ಲಮಪ್ರಭು ದೇವಸ್ಥಾನವು ಇಲ್ಲಿದೆ. ಅಷ್ಟೇ ಅಲ್ಲ ಈ ಗ್ರಾಮದಲ್ಲಿ ಅಮೋಘಸಿದ್ಧ ಶಂಕರಲಿಂಗ ದೇವಸ್ಥಾನಗಳಿದ್ದು ಪ್ರತಿ ವರ್ಷವೂ ಕೂಡ ಅದ್ಧೂರಿಯಾಗಿ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಕಲಬುರಗಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಹಾಗೂ ಗ್ರಾಮದ ಜನರು ಮಾಡಿಯಾಳ ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸುತ್ತಾರೆ. ಬದಾಮಿ ಅಮವಾಸ್ಯೆಯಂದು ಅಮೋಘಸಿದ್ದ ಜಾತ್ರೆ ಜರುಗುತ್ತದೆ. ಈ ಜಾತ್ರೆಗೆ ಐದು ದಿನ ಮುನ್ನ ಹೊಳೆಗೆ ಹೋಗಿ ಅಲ್ಲಿಂದ ಸೂತ್ತಮುತ್ತ ದಹಳ್ಳಿಗಳಲ್ಲಿ ದೇವರ ಮೇರವಣಿಗೆ ಸಾಗಿ ಬರುತ್ತದೆ. ಅಮವಾಸ್ಯೆ ದಿನ ದೇವಸ್ಥಾನಕ್ಕೆ ದೇವರು ಬಂದು ನೆಲೆಸುತ್ತಾನೆ. ಬಳಿಕ ಜಾತ್ರೆಯ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ. ಅಮೋಘಸಿದ್ದ ದೇವಸ್ಥಾನದಲ್ಲಿ ಪ್ರತಿ ವರ್ಷ ಹೇಳಿಕೆ ನಡೆಯುತ್ತದೆ. ವರ್ಷ ಪೂರ್ತಿ ಆಗುಹೋಗುಗಳು, ಮಳೆ ಬೆಳೆಗಳ ಬಗ್ಗೆ ಹೇಳಿಕೆ ನಡೆಯುತ್ತದೆ.
ಮಾಡಿಯಾಳ ಗ್ರಾಮದಲ್ಲಿ ದೇವಸ್ಥಾನಗಳು ಮಾತ್ರವಲ್ಲ, ದರ್ಗಾಗಳು ಕೂಡ ಅಷ್ಟೇ ಪ್ರಸಿದ್ಧಿಯನ್ನು ಪಡೆದಿದ್ದು, ಮೋಹರಂ ಸೇರಿ ಹಲವು ಧಾರ್ಮಿಕ ಆಚರಣೆಗಳು ಜರಗುತ್ತವೆ. ದೇವರ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯ ಹಾಗೂ ದರ್ಗಾ ಜಾತ್ರೆಗಳಲ್ಲಿ ಹಿಂದೂ ಸಮುದಾಯ ಪಾಲ್ಗೊಂಡು ಸಹೋದರತ್ವದಿಂದ ಎಲ್ಲರೂ ಸೇರಿ ಸಂಭ್ರಮಿಸುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.
ಈ ಕುರಿತು, ಗ್ರಾಮಸ್ಥ ಶಿವಶರಣಪ್ಪ ಮಾಡಿಯಾಳ ಮಾತನಾಡಿ, ಮಾಡಿಯಾಳ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಇತಿಹಾಸ ಇದೆ. ಈ ಗ್ರಾಮದಲ್ಲಿ ನೂರಾರು ದೇವಸ್ಥಾನಗಳಿವೆ. ಈ ದೇವಸ್ಥಾನದಿಂದ ಗ್ರಾಮದಲ್ಲಿರುವ ಗುಡ್ಡದವರೆಗೆ 3ಕಿ.ಮೀ ದೂರದ ಸುರಂಗ ಮಾರ್ಗ ಇದೆ. ಪ್ರಭುಲಿಂಗೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಇಲ್ಲಿವೆ. ಶಂಕರಲಿಂಗೇಶ್ವರ ದೇವಸ್ಥಾನದಿಂದ ಬೀದರ್ಗೆ ಹೋಗಿ ಅಲ್ಲಿ 5 ದಿನಗಳ ಕಾಲ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಹೇಳಿಕೆಯೂ ಕೂಡ ನಡೆಯುತ್ತದೆ ಎಂದರು.
ಇದನ್ನೂ ಓದಿ: ರಾಮನ ಕಾಲದ ಯಡ್ರಾಮಿ ರಾಮತೀರ್ಥ ಕುಂಡಕ್ಕೆ ಬೇಕಿದೆ ಕಾಯಕಲ್ಪ : ಪ್ರವಾಸಿ ತಾಣ ಮಾಡಲು ಆಗ್ರಹ
ಮಾಡಿಯಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂದಾಜು 10 ಸಾವಿರ ಜನಸಂಖ್ಯೆ ಇದೆ. 9 ನೇ ಶತಮಾನದ ಶಂಕರಲಿಂಗೇಶ್ವರ ದೇವಸ್ಥಾನ, ಐತಿಹಾಸಿಕ ಅಲ್ಲಮಪ್ರಭು ದೇವಸ್ಥಾನ, ಏಳುಕೋಟೆ ಮಾಡಿಯಾಳ ಮಲ್ಲಯ್ಯ ದೇವಸ್ಥಾನ, ಅಮೋಘಸಿದ್ದೇಶ್ವರ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಒಪ್ಪತ್ತೇಶ್ವರ ಮಠ ಸೇರಿದಂತೆ ನೂರಾರು ದೇವಸ್ಥಾನಗಳಿವೆ ಎಂದು ಗ್ರಾಮದ ಮುಖಂಡ ಭೀಮಾಶಂಕರ ಮಾಡಿಯಾಳ ಮಾಹಿತಿ ನೀಡಿದ್ದಾರೆ.