ಕಲಬುರಗಿ: ರೈತರಿಗೆ ನೀರಾವರಿ ಸೌಲಭ್ಯ ನೀಡುವುದಾಗಿ ಹೇಳಿ ಕಾಮಗಾರಿ ನಡೆಸದೆ ಅಧಿಕಾರಿಗಳು 21.25 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಹಾಗೂ ಆಂದೋಲದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಜೇವರ್ಗಿ ತಾಲೂಕಿನ ಆಂದೋಲದಲ್ಲಿ ಹೊಲಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಿತ್ತು. ಈ ಊರಿನ ಇಬ್ಬರು ರೈತರಿಗೆ ನೀರಾವರಿ ಕಲ್ಪಿಸಿರುವುದಾಗಿ ಹೇಳಿ 21.25 ಲಕ್ಷ ರೂಪಾಯಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಣದ ದುರ್ಬಳಕೆಯಲ್ಲಿ ಗುತ್ತಿಗೆದಾರ ಶಿವಾನಂದ್ ಮುಧೋಳ, ಇಂಜಿನಿಯರ್ ನರೇಶ್ ಸೇರಿ 7 ಜನ ಶಾಮೀಲಾಗಿದ್ದಾರೆ. ಈ ಏಳು ಜನರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಆದರೆ ಪೊಲೀಸರು ಇದುವರೆಗೂ ಸಹ ಯಾರನ್ನೂ ಬಂಧಿಸಿಲ್ಲ. ಅಲ್ಲದೆ ಸಾಕ್ಷ್ಯ ನಾಶಪಡಿಸಲೂ ಆರೋಪಿಗಳು ಯತ್ನಿಸಿದ್ದಾರೆ ಎಂದು ಸ್ವಾಮಿಜಿ ಹೇಳಿದ್ದಾರೆ.
ಈ ಕೂಡಲೇ ಅಧಿಕಾರಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.