ಕಲಬುರಗಿ: ಹೈದರಾಬಾದ್ ಕರ್ನಾಟಕ ವಿಷಯದಲ್ಲಿ ಬಿಜೆಪಿ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಆರೋಪಿಸಿದ್ದಾರೆ.
ಈ ಭಾಗದಲ್ಲಿ 16 ಜನ ಬಿಜೆಪಿ ಶಾಸಕರಿದ್ದರೂ ಒಂದೇ ಸಚಿವ ಸ್ಥಾನ ನೀಡಲಾಗಿದೆ. ಇದುವರೆಗೂ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನ ನೇಮಿಸಿಲ್ಲ. ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಕಾಳಜಿ ಎಷ್ಟರಮಟ್ಟಿಗೆ ಇದೆ ಅನ್ನೋದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದ್ರು.
ಈಗಲಾದರೂ ಈ ಭಾಗಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು. ಕೂಡಲೇ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರು, ಸದಸ್ಯರ ನೇಮಕವನ್ನೂ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು. ಅಲ್ಲದೆ ಪ್ರತಿ ಕ್ವಿಂಟಲ್ ತೊಗರಿಗೆ 15 ಸಾವಿರ ರೂ., ಹೆಸರು ಮತ್ತು ಉದ್ದಿಗೆ ಕ್ವಿಂಟಲ್ ಗೆ 12 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು. ಅಲ್ಲದೆ, ಬರದಿಂದ ತತ್ತರಿಸಿರುವ ರೈತರಿಗೆ ನೆರವು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.