ಕಲಬುರಗಿ : ಸಿಎಂ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದಕ್ಕೆ ಸಚಿವ ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ದೂರ ಇಡ್ತಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಕಾರಣ, ಇಂದು ಕಲಬುರಗಿ ನಗರಕ್ಕೆ ಆಗಮಿಸಿದ್ದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರನ್ನು ಸ್ಥಳೀಯ ಶಾಸಕರಾಗಲಿ, ಬಿಜೆಪಿಯ ನಾಯಕರಾಗಲಿ ಯಾರೊಬ್ಬರೂ ಕೂಡ ಭೇಟಿಯಾಗಲು ಬಾರದಿರುವುದು ಇಂತಹ ಅನುಮಾನಗಳಿಗೆ ಕಾರಣವಾಗಿದೆ.
ಸಚಿವ ಯೋಗೇಶ್ವರ್ ಅವರು ಇಂದು ಕಲಬುರಗಿ ನಗರಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದರೂ ಸಹ ಬಿಜೆಪಿಯ ಯಾರೊಬ್ಬ ನಾಯಕರು ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಅಷ್ಟೇ ಅಲ್ಲ, ಯೋಗೇಶ್ವರ್ ಅವರು ವಿಮಾನ ನಿಲ್ದಾಣದಿಂದ ನಗರದ ಅತಿಥಿ ಗೃಹಕ್ಕೆ ಬಂದರೂ ಸಹ ಬಿಜೆಪಿಯ ಶಾಸಕರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೇರಿದಂತೆ ಯಾರೊಬ್ಬರು ಕೂಡ ಸಚಿವರನ್ನ ಭೇಟಿಯಾಗಲಿಲ್ಲ.
ಹೀಗಾಗಿ, ಕಲಬುರಗಿ ನಗರದಲ್ಲಿ ಸಚಿವ ಯೋಗೇಶ್ವರ್ ಅವರು ಏಕಾಂಗಿಯಾಗಿದ್ದಾರೆ. ಇದನೆಲ್ಲಾ ಗಮನಿಸಿದರೆ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಯೋಗೇಶ್ವರ್ ಅವರನ್ನು ಹೊರಗಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ.
ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆ ಬಿಜೆಪಿ ನಾಯಕರು ಸಿ ಪಿ ಯೋಗೇಶ್ವರ್ ಅವರನ್ನು ಭೇಟಿಯಾಗಲು ಬರಲಿಲ್ಲವಾ? ಅದಕ್ಕಾಗಿಯೇ ಅವರನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಓದಿ: ಮೈಸೂರು: ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲಕ ನಾಳೆಯಿಂದ ಬಂಡೀಪುರ ಸಫಾರಿ ಓಪನ್...