ಕಲಬುರಗಿ: ಬ್ರಿಟಿಷರ ಕಪಿಮುಷ್ಠಿಯಿಂದ ಭಾರತ ಮಾತೆಯನ್ನು ರಕ್ಷಿಸಲು ಹೋರಾಟ ನಡೆಸಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ ಗೌರವಿಸಿ ಸನ್ಮಾನಿಸಲಾಯಿತು.
ಆಳಂದ ತಾಲೂಕಿನ ಹಿರೋಳಿ ಗ್ರಾಮದ ಸ್ವಾತಂತ್ರ್ಯ ಸೇನಾನಿ ಕಲ್ಯಾಣರಾವ ಮಾನಾಜಿ ಅವರ ಸ್ವಗೃಹಕ್ಕೆ ಶಾಸಕ ಸುಭಾಷ ಗುತ್ತೇದಾರ ಭೇಟಿ ನೀಡಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿವರ್ಷ ರಾಷ್ಟ್ರಪತಿಗಳು ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಚಹಾ ಕೂಟಕ್ಕೆ ಆಹ್ವಾನಿಸಿ ಗೌರವಿಸುವ ಪದ್ಧತಿ ಇದೆ. ಆದರೆ ಕೊರೊನಾ ಆತಂಕದ ಹಿನ್ನೆಲೆ ಸುರಕ್ಷತೆ ನಿಟ್ಟಿನಲ್ಲಿ ಈ ಬಾರಿ ಸ್ವಾತಂತ್ರ್ಯ ಸೇನಾನಿಗಳ ಮನೆಗೆ ತೆರಳಿ ಗೌರವಿಸಿ ಸನ್ಮಾನಿಸುವಂತೆ ರಾಷ್ಟ್ರಪತಿಗಳು ಸೂಚಿಸಿರುವ ಹಿನ್ನೆಲೆ ಕಲ್ಯಾಣರಾವ ಮಾನಾಜಿ ಅವರ ಸ್ವಗೃಹದಲ್ಲೇ ಶಾಸಕರು ಗೌರವಿಸಿ ಅಭಿನಂದಿಸಿ, ರಾಷ್ಟ್ರಪತಿಗಳು ಕಳಿಸಿದ ಶುಭಾಷಯ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಮಾತನಾಡಿದ ಶಾಸಕ ಗುತ್ತೇದಾರ, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿರುವ ಕಲ್ಯಾಣರಾವ ಅವರಿಗೆ ಗೌರವಿಸುತ್ತಿರುವುದು ಖುಷಿ ತಂದಿದೆ. ನಮಗೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಇವರ ಪಾತ್ರ ಹಿರಿದು ಎಂದು ಹೇಳಿದರು.