ಕಲಬುರಗಿ: ಬೆಂಗಳೂರಿನಲ್ಲಿ ಓಡಾಡಲು ಹೊಸ ಕಾರು ಬೇಕೆಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಎನ್ಇಕೆಆರ್ಟಿಸಿ ಅಧ್ಯಕ್ಷ ಹಾಗೂ ಸೇಡಂ ಶಾಸಕರಾಗಿದ್ದಾರೆ. ಅಷ್ಟೇ ಅಲ್ಲದೆ ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದಾರೆ. ಇವರ ಬಳಿ ಡಿಸಿಸಿ ಬ್ಯಾಂಕ್, ಎನ್ಇಕೆಆರ್ಟಿಸಿಯಿಂದ ಎರಡು ಕಾರುಗಳಿವೆ. ಆದರೂ ಬೆಂಗಳೂರಿನಲ್ಲಿ ಸಂಚರಿಸಲು ಕಾರು ಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೋವಾ ಕ್ರಿಸ್ಟಾ ಖರೀದಿಗೆ ಮುಂದಾಗಿರುವ ಎನ್ಇಕೆಆರ್ಟಿಸಿ:
ಎನ್ಇಕೆಆರ್ಟಿಸಿ ಬೋರ್ಡ್ ಸಭೆಯಲ್ಲಿ ಅಧ್ಯಕ್ಷರ ಬೇಡಿಕೆಯನ್ನು ಪರಿಗಣಿಸಲಾಗಿದ್ದು, ಅಧ್ಯಕ್ಷರು ಮತ್ತು ಎಂಡಿಗೆ ತಲಾ ಒಂದು ಕಾರನ್ನು ಖರೀದಿಸಲು ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆಸಿ ಕಾರು ಖರೀದಿಗೆ ಮುಂದಾಗಿದ್ದಾರೆ. ಮೊದಲೇ ಎನ್ಇಕೆಆರ್ಟಿಸಿ ನಷ್ಟದಲ್ಲಿದ್ದು, ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ಹೀಗಿರುವಾಗ ಅಧ್ಯಕ್ಷರು ಈ ರೀತಿ ಕಾರಿನ ಮೇಲೆ ಕಾರು ಖರೀದಿಸಿರುವುದು ಸರಿಯೇ ಎಂಬುದು ಸ್ಥಳೀಯ ಹೋರಾಟಗಾರರ ಪ್ರಶ್ನೆಯಾಗಿದೆ.
ರಾಜಕುಮಾರ್ ಪಾಟೀಲ್ ಬಳಿ ಸದ್ಯ ಮೂರು ಕಾರುಗಳಿವೆ. ಅಧ್ಯಕ್ಷರು ಅಗತ್ಯ ಇದ್ದಾಗ ಕೇಳಿದರೆ ಸಾರಿಗೆ ನಿಗಮವೇ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡುತ್ತದೆ. ಹೀಗಿರುವಾಗ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡುತ್ತಿರುವುದು ಸರಿಯೇ ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
ಅಭಿವೃದ್ಧಿ ಕಾರ್ಯಕ್ಕೆ ಬ್ರೇಕ್, ದುಂದು ವೆಚ್ಚಕ್ಕೆ ಮಾತ್ರ ಬೀಳ್ತಿಲ್ಲ ಕಡಿವಾಣ:
ಕೋವಿಡ್ ನೆಪ ಹೇಳಿ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನುದಾನ ಕಡಿತ ಮಾಡಲಾಗಿದೆ. ಆದರೆ ಈ ರೀತಿಯ ಕೆಲಸಗಳಿಗೆ ಯಾವುದೇ ಕಡಿವಾಣ ಹಾಕದೆ ದುಂದು ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ಎನ್ಇಕೆಆರ್ಟಿಸಿ ಅಧ್ಯಕ್ಷರು ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡದಂತೆ ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿ ಸಂಸ್ಥಾಪಕ ಲಕ್ಷ್ಮಣ ದಸ್ತಿ ತಾಕೀತು ಮಾಡಿದ್ದಾರೆ.