ಕಲಬುರಗಿ : ಕೆಲವೇ ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ದೊಡ್ಡ ಬದಲಾವಣೆಯಾಗಲಿದೆ. ಹಿರಿಯ ಸಚಿವರಿಗೆ ಕೊಕ್ ಸಿಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗಲಿದೆ. ಅನೇಕ ಹಿರಿಯರನ್ನು ಪಕ್ಷದ ಕೆಲಸಕ್ಕೆ ಕಳುಹಿಸಿ ಎರಡನೇ ಹಂತದ ನಾಯಕರಿಗೆ ಅವಕಾಶ ಕೊಡುವ ಚಿಂತನೆ ನಡೆದಿದೆ ಎಂದರು.
ನಮಗೆ ನೇತೃತ್ವ ಕೊಟ್ಟರೆ 130 ಸೀಟ್ : ಹಾನಗಲ್ ಸೋಲಿಗೆ ಯಾರು ಕಾರಣ ಅಂತಾ ಗೊತ್ತಿದೆ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಸೋಮಣ್ಣ ಹಾನಗಲ್ಗೆ ಹೋಗಿದ್ದರೆ ಅಲ್ಲೂ ಕೂಡ ಗೆಲ್ಲುತ್ತಿದ್ದೆವು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮಗೆ ನೇತೃತ್ವ ಕೊಟ್ಟರೆ ರಾಜ್ಯದಲ್ಲಿ 130 ಸ್ಥಾನ ಗೆಲ್ಲುತ್ತೇವೆ. ಮುಂದೆ ನೀವು ಸಿಎಂ ಆಗ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ನನಗೆ ಮಂತ್ರಿಯನ್ನೇ ಮಾಡಲು ಬಿಡುತ್ತಿಲ್ಲ, ಸಿಎಂ ಮಾಡೋದು ದೂರದ ಮಾತು ಎಂದರು.
ನಮ್ಮ ಹತ್ತಿರ ಬಿಟ್ ಕಾಯಿನ್ ಅಲ್ಲ ಬಿಟ್ಟಿ ಕಾಯಿನೂ ಇಲ್ಲ : ರಾಜ್ಯದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಬಿಟ್ ಕಾಯಿನ್ ಬಗ್ಗೆ ಮಾತನಾಡಿದ ಅವರು, ಈ ಹಿಂದೆ ಅಂಜನಾ ತೋರಿಸಿ ಗಂಟು ಎಲ್ಲಿದೆ ಅಂತಾ ಹೇಳ್ತಿದ್ದರು. ಅದೇ ರೀತಿ ಈಗ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆದಿದೆ. ನನ್ನ ಜೇಬಿನಲ್ಲಿ ಬಿಟ್ಟಿ ಕಾಯಿನ್ ಇಲ್ಲ, ನನಗೆ ಬಿಟ್ ಕಾಯಿನ್ ಅಂದ್ರೂ ಗೊತ್ತಿರಲಿಲ್ಲ, ಈಗ ಎದ್ದಿರುವ ಚರ್ಚೆಯಿಂದಲೇ ಇಂತಹದೊಂದು ಕಾಯಿನ್ ಇರುತ್ತೆ ಅನ್ನೋದು ಗೊತ್ತಾಗಿದೆ.
ಈ ದಂಧೆೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ ಅಂತಾ ಕಾಂಗ್ರೆಸ್‌ನವರು ಆರೋಪ ಮಾಡ್ತಿದ್ದಾರೆ. ಆದ್ರೆ, ಈವರೆಗೆ ದಾಖಲೆ ನೀಡುತ್ತಿಲ್ಲ. ಪ್ರಧಾನಿ ಮೋದಿ ಯಾವುದೇ ಹಗರಣಗಳನ್ನು ಸಮರ್ಥಿಸೋದಿಲ್ಲ, ನನ್ನ ಪ್ರಕಾರ ನಮ್ಮವರು ಯಾರು ಈ ಹಗರಣದಲ್ಲಿ ಇಲ್ಲಾ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೆ ವೇಳೆ ಮಂತ್ರಿ ಭಾಗ್ಯಕ್ಕಾಗಿ ನಿಕಟಪೂರ್ವ ಅಥವಾ ಹಾಲಿ ಮನೆಗಳಿಗೆ ಹೋಗೋದಿಲ್ಲ. ಮನೆಗಳಿಗೆ ಸುತ್ತಿ ಭಾಗ್ಯ ಪಡೆಯುವ ಅಗತ್ಯ ನನಗಿಲ್ಲ ಅಂತಾ ಹೇಳಿದರು.