ಕಲಬುರಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ರೈತ ವಿರೋಧಿ ಸರ್ಕಾರವಿದೆ. ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇವರಿಗಿಲ್ಲ ಎಂದು ಶಾಸಕ, ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ರೈತರು ಇದ್ದೀವಿ ಅಂತಾ ತೋರಿಸುವುದಕ್ಕೆ ಪ್ರತಿಭಟನೆ ಎಂಬ ಸಿಎಂ ಬಿಎಸ್ವೈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಬಿಎಸ್ವೈ ಹೆಗಲ ಮೇಲೆ ಹಸಿರು ಶಾಲು ಹಾಕಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅವರ ಎಲ್ಲಾ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿವೆ. ಅವರಿಗೆ ರೈತರ ಬಗ್ಗೆ ಯಾವ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದ ರೈತರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
ಪ್ರಧಾನಿ ಹಾಗೂ ನಮ್ಮ ಸಿಎಂ ಅವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೀಗಾಗಿ ಸರ್ವಾಧಿಕಾರ ಹಾಗೂ ಹಿಟ್ಲರ್ ರಾಜಕೀಯ ಮಾಡುತ್ತಿದ್ದಾರೆ. ರೈತರ ಬಗ್ಗೆ, ಬಡವರ ಬಗ್ಗೆ, ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳಿವು ಎಂದು ಆಕ್ರೋಶ ವ್ಯಕ್ತಪಡಿಸಿದರು.