ಕಲಬುರಗಿ: ವಿವಾದಗಳನ್ನು ಎಳೆದು ತಂದು ಜನರ ದಿಕ್ಕು ತಪ್ಪಿಸಬೇಕೆನ್ನುವುದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಶಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಅನಗತ್ಯವಾಗಿ ಎಳೆದು ತಂದವರು ಯಾರು?. ಅಣ್ಣ- ತಮ್ಮ ಇಬ್ಬರೂ ಸೆಲ್ಯೂಲರ್ ಜೈಲಿನಲ್ಲಿ ಇದ್ದಂತಹ ಯಾವುದಾದರೂ ಹೋರಾಟಗಾರರು ಈ ದೇಶದಲ್ಲಿದ್ದಾರಾ?. ಈ ಎಲ್ಲಾ ವಿವಾದಗಳನ್ನು ಎಳೆದು ತಂದವರೇ ಸಿದ್ದರಾಮಯ್ಯನವರು ಎಂದು ಇಂಧನ ಖಾತೆ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.
ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎನ್ನುವ ಕಾಂಗ್ರೆಸ್ ಸವಾಲು ಸ್ವೀಕರಿಸಲು ನಾವು ಸಿದ್ಧ. ನನ್ನ ಇಲಾಖೆ ಹಾಗೂ ನಮ್ಮ ಸರ್ಕಾರದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೂ ನಾವು ಸಿದ್ಧರಿದ್ದೇವೆ ಎಂದು ಸಚಿವರು ಕಾಂಗ್ರೆಸ್ಗೆ ಸವಾಲು ಹಾಕಿದರು. ಬಜೆಟ್ ಬಗ್ಗೆ , ಅಭಿವೃದ್ಧಿ ಬಗ್ಗೆ ಒಂದೇ ಒಂದು ದಿನವೂ ಚರ್ಚೆ ಮಾಡದ ನಿಮಗೆ ಮಾತನಾಡಲು ಏನು ಯೋಗ್ಯತೆ ಇದೆ? ಎಂದು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಬೇರೆ, ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ಬೇರೆಯಾಗಿದೆ. ಸಿದ್ದರಾಮಯ್ಯ ಅವರು ಅವಕಾಶವಾದಿ. ಆರಂಭದ ದಿನಗಳಲ್ಲಿ ಅವರು ಸಮಾಜವಾದಿ ಆಗಿದ್ದರು. ನಂತರ ಜೆಡಿಎಸ್ಗೆ ಬಂದ್ರು, ಆನಂತರ ಅಧಿಕಾರಕ್ಕಾಗಿ ಕಾಂಗ್ರೆಸ್ಗೆ ಹೋದ್ರು. ಈಗಲೂ ಅವರು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದರೆ ಕಾಂಗ್ರೆಸ್ ತೊರೆದು ಯಾವ ಪಾರ್ಟಿಗೆ ಹೋಗ್ತಾರೆ ಎಂಬುದೇ ಪ್ರಶ್ನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವೀರ ಸಾವರ್ಕರ್ ಹೆಸರು ಹೇಳುವುದಕ್ಕೆ ಕಾಂಗ್ರೆಸ್ಸಿನವರಿಗೆ ಯೋಗ್ಯತೆ ಇಲ್ಲ: ಸಚಿವ ಸಿಸಿ ಪಾಟೀಲ್
ಕೆಪಿಟಿಸಿಎಲ್ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ನೇಮಕಾತಿ ನಮ್ಮ ಇಲಾಖೆಯಾದರೂ ಕೆಇಎ ಪರೀಕ್ಷೆ ನಡೆಸಿದೆ. ಪ್ರಶ್ನೆ ಪತ್ರಿಕೆ ಲೀಕಾಗಿದೆ. ಅಲ್ಲಿ ಏನೋ ವ್ಯತ್ಯಾಸ ಆಗಿದೆ ಎಂದರೆ ಯಾವುದೇ ಕಾರಣಕ್ಕೂ ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಮೊದಲ ಹಂತದ ವರದಿಯಲ್ಲಿ ಆ ರೀತಿ ಏನೂ ಆಗಿಲ್ಲವೆಂದು ಜಿಲ್ಲಾಧಿಕಾರಿಗಳು ನಮಗೆ ಹೇಳಿದ್ದಾರೆ ಎಂದರು.