ಕಲಬುರಗಿ: ತುಕ್ಡೆ ತುಕ್ಡೆ ಗ್ಯಾಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು, ಏನದು ತುಕ್ಡೆ ಗ್ಯಾಂಗ್ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನಕ್ಕೆ ಜೈ ಎಂದವ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಕಲಾಪ ಬಹಿಷ್ಕಾರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಅವರಿಗೆ ಉತ್ತರ ಕರ್ನಾಟಕದ ನೆರೆ ಪೀಡಿತರ ಸಮಸ್ಯೆ ಚರ್ಚಿಸೋದು ಬೇಕಿಲ್ಲ. ಮನೆ ಮಠ ಕಳೆದುಕೊಂಡವರ ಬಗ್ಗೆ ಚರ್ಚೆ ಮಾಡಲು ಅವರಿಗೆ ಸಮಯವಿಲ್ಲ. ಪಾಕಿಸ್ತಾನಕ್ಕೆ ಜೈ ಅಂದವರಿಗೆ ಅವ್ರು ಸಹಕಾರ ಕೊಡ್ತಿದಾರೆ. ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ. ನಮ್ಮ ಪಕ್ಷ ಎಲ್ಲಿಯೂ ಕಾಂಪ್ರಮೈಸ್ ಆಗಲ್ಲ. ಯಾರೇ ಇರಲಿ, ಎಂಥವರೇ ಇರಲಿ ಪಾಕಿಸ್ತಾನಕ್ಕೆ ಜೈ ಅಂದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತಗೋತೀವಿ ಎಂದು ಎಚ್ಚರಿಸಿದರು.
ಬೆಂಕಿನೇ ಇಲ್ಲಾ ಅಂದ್ಮೇಲೆ ಹೊಗೆ ಎಲ್ಲಿಂದ?: ಬೆಂಕಿನೇ ಇಲ್ಲ ಅಂದ್ಮೇಲೆ ಹೊಗೆ ಎಲ್ಲಿಂದ ಬರುತ್ತೆ ಎಂದ ಶ್ರೀರಾಮುಲು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸದಲ್ಲಿನ ಸಭೆಗೆ ಮಾರ್ಮಿಕವಾಗಿ ಉತ್ತರಿಸಿದರು. ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆದಿರೋದು ಸತ್ಯ. ಉತ್ತರ ಕರ್ನಾಟಕದ ಸಂಸದರು ಮತ್ತು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಿಟ್ಟರೆ ಸಭೆ ಬೇರೆ ಉದ್ದೇಶ ಹೊಂದಿರಲಿಲ್ಲ. ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.