ಕಲಬುರಗಿ: ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸದಂತೆ ಷಡ್ಯಂತ್ರ ರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಸ್ಮಿತೆಗೆ ಧಕ್ಕೆ, ನಿರುದ್ಯೋಗ ಸಮಸ್ಯೆ ಹೆಚ್ಚಳದಿಂದ ಕನ್ನಡಿಗರು ಬಿಜೆಪಿ ವಿರುದ್ದ ಸಿಡಿದೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಕೇಂದ್ರ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ದ ದ್ವೇಷ ರಾಜಕಾರಣ ಪ್ರಾರಂಭಿಸಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರದಿಂದ 5 ಕೆಜಿ ಹಾಗೂ ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆ ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ವಿತರಿಸುವುದಾಗಿ ಸಿಎಂ ಜೂನ್ 2ರಂದು ಹೇಳಿದ್ದರು. ಅದರಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪತ್ರ ಬರೆದು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿದ್ದರು. ಇದಕ್ಕೆ ಉತ್ತರಿಸಿದ ಎಫ್‌ಸಿಐ ಜೂನ್ 12 ರಂದು ಪತ್ರ ಬರೆದು ಪ್ರತಿ ಕ್ವಿಂಟಲ್‌ಗೆ 3,400 ರೂಪಾಯಿಯಂತೆ 2.08 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿಕೊಂಡಿತು. ಅಚ್ಚರಿ ಅಂದರೆ, ಕೇಂದ್ರ ಆಹಾರ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ಆಣತಿಯಂತೆ ಎಫ್‌ಸಿಐ ಜೂನ್ 13ರಂದು ಪತ್ರ ಬರೆದು ಅಕ್ಕಿ ಸರಬರಾಜು ಮಾಡಲು ನಿರಾಕರಿಸಿದೆ. ಎಫ್‌ಸಿಐನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನಿದ್ದು ಖಾಸಗಿಯವರಿಗೆ ಸರಬರಾಜು ಮಾಡಲು ಸಿದ್ಧವಿದೆ.
ಆದರೆ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿದೆ. ಇದನ್ನು ಗಮನಿಸಿದರೆ ಕೇಂದ್ರಕ್ಕೆ ರಾಜ್ಯವನ್ನು ಹಸಿವುಮುಕ್ತ ಮಾಡುವುದು ಬೇಕಿಲ್ಲ ಎನ್ನವುದು ಗೊತ್ತಾಗುತ್ತಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಮೆರಿಕ ಹಾಗೂ ಯೂರೋಪ್ ದೇಶಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಇದು ದೇಶದ್ರೋಹವಲ್ಲವೇ ಎಂದು ಖರ್ಗೆ ಪ್ರಶ್ನಿಸಿದರು.
ಜುಲೈ 1ರಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವುದಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಛತ್ತೀಸ್ಗಢ ರಾಜ್ಯವನ್ನು ಸಂಪರ್ಕಿಸಲಾಗಿದೆ. ಅವರು 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ. ಹಾಗಾಗಿ, ಅನ್ನಭಾಗ್ಯ ಯೋಜನೆ ಜಾರಿಗೊಳಿಸುತ್ತೇವೆ ಎಂದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೇಕಾಗುವಷ್ಟು ಅನುದಾನ ನೀಡಲು ಸಿದ್ದವಿರುವುದಾಗಿ ಹೇಳಿದ ಸಚಿವರು, ಮಳೆ ಕೊರತೆಯಿಂದ ಮೋಡ ಬಿತ್ತನೆ ಕುರಿತಂತೆ ಕಂದಾಯ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಇನ್ನು, ಪ್ರಸ್ತುತ ನಡೆಯುತ್ತಿರುವ ಕೆಕೆಆರ್‌ಡಿಬಿ ಅವ್ಯವಹಾರದ ತನಿಖೆಯಲ್ಲಿ ನನ್ನ ಆಪ್ತ ಕಾರ್ಯದರ್ಶಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಶಾಸಕ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ, ಬಿ.ಆರ್. ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡೇವಿಡ್ ಸಿಮೆಯೋನ್, ಸುಭಾಷ ರಾಠೋಡ, ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರಿದ್ದರು.
ಇದನ್ನೂಓದಿ: 15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ