ಕಲಬುರಗಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಯುಕ್ತ ಕಂದಾಯ ಸಚಿವ ಆರ್. ಅಶೋಕ್ ಆಗಸ್ಟ್ 20ರಂದು ಸೇಡಂ ತಾಲೂಕಿನ ಆಡಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ.
ಗುರುವಾರ ಆಡಕಿ ಗ್ರಾಮದ ಶಾಲಾ ಅವರಣಕ್ಕೆ ಭೇಟಿ ನೀಡಿ, ಪೂರ್ವ ಸಿದ್ಧತೆ ಕಾರ್ಯ ವೀಕ್ಷಿಸಿದ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಗ್ರಾಮ ವಾಸ್ತವ್ಯ ಭಾಗವಾಗಿ ಐತಿಹಾಸಿಕವಾಗಿ ಡಿಸಿಸಿ ಬ್ಯಾಂಕಿನಿಂದ 10 ಸಾವಿರ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತದೆ. ಅಲ್ಲದೆ, ಕಾರ್ಮಿಕ ಕಾರ್ಡ್, ಆರೋಗ್ಯ ಕಾರ್ಡ್, ಇ-ಶ್ರಮ್, ಕೃಷಿ ಪರಿಕರ ಸೇರಿ ಸುಮಾರು 25ರಿಂದ 30 ಸಾವಿರ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯ ವಿತರಿಸಲಾಗುವುದು ಎಂದರು.
ಆಗಸ್ಟ್ 19ರಂದು ಸೇಡಂ ಪಟ್ಟಣದಲ್ಲಿ ವಾಸ್ತವ್ಯ ಮಾಡಲಿರುವ ಸಚಿವ ಅಶೋಕ್ ಅವರು, 20ರಂದು ಬೆಳಗ್ಗೆ 11 ಗಂಟೆಗೆ ಆಡಕಿ ಗ್ರಾಮಕ್ಕೆ ತೆರಳಲಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ದಿನವಿಡಿ ಗ್ರಾಮಸ್ಥರ ಅಹವಾಲು ಆಲಿಕೆ, ವಿವಿಧ ಸೌಲಭ್ಯಗಳ ವಿತರಣೆ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸಾಯಂಕಾಲ ಗ್ರಾಮಸ್ಥರೊಂದಿಗೆ ಗ್ರಾಮ ಸಭೆ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ರಾತ್ರಿ ಶಾಲಾ ಮಕ್ಕಳೊಂದಿಗೆ ಊಟ ಸವಿದು, ಶಾಲೆಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಇದನ್ನೂ ಓದಿ: ಪದಾಧಿಕಾರಿಗಳ ಸಭೆಯಲ್ಲಿ ಮಿಷನ್ 150 ರೋಡ್ ಮ್ಯಾಪ್ ಕುರಿತು ಚರ್ಚೆ: ಮಹೇಶ್ ಟೆಂಗಿನಕಾಯಿ