ಕಲಬುರಗಿ: ಕೀಟನಾಶಕ ಸಿಂಪಡಣೆ ವೇಳೆ ಹಲವು ರೈತರು ಅಸ್ವಸ್ಥಗೊಂಡ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ. ಹತ್ತಿ ಮತ್ತು ತೊಗರಿಗೆ ಕೀಟನಾಶಕ ಸಿಂಪಡಣೆ ವೇಳೆ ಈ ಅವಘಡ ಸಂಭವಿಸಿದೆ.
20ಕ್ಕೂ ಹೆಚ್ಚು ರೈತರಿಗೆ ಅಡ್ಡ ಪರಿಣಾಮವಾಗಿದೆ. ತಾಲೂಕಿನ ನಾಲವಾರ, ಲಾಡ್ಲಾಪುರ, ಹಣ್ಣಿಕೇರಾ, ರಾಮನಾಯಕ ತಾಂಡಾಗಳಲ್ಲಿ ಘಟನೆ ಬೆಳಕಿಗೆ ಬಂದಿದೆ. ವಾಂತಿ, ಭೇದಿ, ಕಣ್ಣು ಉರಿ, ಕೈ ಕಾಲು ನಿಶ್ಶಕ್ತಿ, ತಲೆ ಸುತ್ತುವಿಕೆ ಮತ್ತಿತರೆ ಸಮಸ್ಯೆಗಳಿಂದ ಬಳಲುತ್ತಿರುವ ರೈತರು, ಚಿಕಿತ್ಸೆಗೆಂದು ಕಲಬುರಗಿ, ವಾಡಿ ಮತ್ತಿತರ ಕಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಔಷಧ ಸಿಂಪಡಣೆ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪರಿಣಾಮ ಘಟನೆ ನಡೆದಿರೋ ಸಾಧ್ಯತೆಗಳಿವೆ. ಪ್ರಬಲ ಕೀಟನಾಶಕದಿಂದ ಸೈಡ್ ಎಫೆಕ್ಟ್ ಉಂಟಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕೀಟನಾಶಕ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.