ಕಲಬುರಗಿ : ಬೀದಿ ನಾಯಿ ವಿಚಾರಕ್ಕೆ ಜಗಳ ನಡೆದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ನಗರದ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ಕಾಲೋನಿ ನಿವಾಸಿ ಗುರುರಾಜ್ ಕುಲಕರ್ಣಿ (35) ಕೊಲೆಯಾದವರು ಎಂದು ಗುರುತಿಸಲಾಗಿದೆ. ತನ್ನ ಕೆಲಸದ ಜತೆಜತೆಗೆ ಸಮಾಜ ಸೇವೆ ಮಾಡುತ್ತಿದ್ದ.
ಘಟನೆ ಹಿನ್ನೆಲೆ : ತನ್ನ ಸಹೋದರಿ ಮನೆ ಹತ್ತಿರ ಬೀದಿ ನಾಯಿಯೊಂದು ಮಾಂಸದ ತುಂಡು ಹಿಡಿದುಕೊಂಡು ಬಂದಿತ್ತಂತೆ. ಈ ವೇಳೆ ಆಕೆ ಮನೆ ಹತ್ತಿರ ಬಂದಿದ್ದ ನಾಯಿಗೆ ಬಿಸ್ಕೇಟ್, ಚಪಾತಿ ಹಾಕಿದ್ದಾಳೆ. ಆ ವೇಳೆ ಪಕ್ಕದ ಮನೆಯ ಪವನ್ ಜಾಗಿರ್ದಾರ್ ಎಂಬಾತ ನಾಯಿಗೆ ಕಲ್ಲಿನಿಂದ ಹೊಡೆದಿದ್ದಾನೆ.
ಆದ್ರೆ, ಕಲ್ಲು ನಾಯಿಗೆ ಬೀಳುವ ಬದಲಾಗಿ ಕುಲಕರ್ಣಿ ಸಹೋದರಿಗೆ ಬಡಿದಿದೆ. ಇದೇ ವಿಚಾರಕ್ಕೆ ಗುರುರಾಜ್ ಕುಲಕರ್ಣಿ ಸಹೋದರಿ ಮತ್ತು ಪವನ್ ಜಾಗಿರ್ದಾರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನಂತರ ಗಲಾಟೆ ತಾರಕಕ್ಕೇರಿ ಗುರುರಾಜ್ ಕೊಲೆಯಾಗಿದೆ.
ತನ್ನ ಸಹೋದರಿಗೆ ಕಲ್ಲು ಬಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗುರುರಾಜ್ ಕುಲಕರ್ಣಿ, ಪವನ್ ಜಾಗಿರ್ದಾರ್‌ಗೆ ಪ್ರಶ್ನೆ ಮಾಡಿದ್ದಾನೆ. ಅದಾದ ನಂತರ ಗುರುರಾಜ್ ಕುಲಕರ್ಣಿ ಸಹೋದರನ ಮೇಲೆ ಪವನ್ ಕಡೆಯವರು ಅಟ್ಯಾಕ್ ಮಾಡಿ ಕಾಲು ಮುರಿದಿದ್ದರು. ಅದಕ್ಕಾಗಿ ಜಾಗಿರ್ದಾರ್ ವಿರುದ್ಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಪವನ್ ಜಾಗಿರ್ದಾರ್ ಬೇಲ್ ಪಡೆದು ಮತ್ತೆ ರಾಜಾರೋಷವಾಗಿ ತಿರುಗಾಡುತ್ತಿದ್ದನಂತೆ. ಆದ್ರೆ, ನಿನ್ನೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪವನ್ ಜಾಗಿರ್ದಾರ್ ಮತ್ತು ಆತನ ತಂಡ ಜಗಳ ಯಾಕೆ ಮುಂದುವರಿಸೋದು?, ಇತ್ಯರ್ಥ ಮಾಡಿಕೊಳ್ಳೊಣ ಬಾ ಅಂತಾ ರಾತ್ರಿ ಫೋನ್ ಮಾಡಿ ಗುರುರಾಜ್ ಕುಲಕರ್ಣಿಯನ್ನು ಕರೆಯಿಸಿಕೊಂಡಿದ್ದಾರೆ.
ಈ ವೇಳೆ ಹೋಟೆಲ್ವೊಂದರ ಬಳಿ ಸಂಧಾನ ಮಾತುಕತೆ ನಡೆಯುತ್ತಿರುವಾಗ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ, ಪವನ್ ಜಾಗಿರ್ದಾರ್ ಮತ್ತು ಆತನ ತಂಡ, ಗುರುರಾಜ್ ಕುಲಕರ್ಣಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾರೆ. ತಾವು ಈ ಹಿಂದೆ ದೂರು ಸಲ್ಲಿಸಿದ್ರೂ ಕ್ರಮ ತೆಗೆದುಕೊಂಡಿಲ್ಲ ಅಂತಾ ಗುರುರಾಜ್ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ವಿಷಯ ಗೊತ್ತಾದ ಮೇಲೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅಥವಾ ಡಿಸಿಪಿ ಬಂದ್ರೆ ಮಾತ್ರ ನಾವು ಮೃತದೇಹ ಎತ್ತಲು ಅವಕಾಶ ಕೊಡ್ತಿವಿ ಅಂತಾ ಕುಟುಂಬಸ್ಥರು ಸುಮಾರು ಐದಾರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಡಿಸಿಪಿ ಅಡ್ಡೂರು ಶ್ರೀನಿವಾಸುಲುಗೆ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೂಡಲೇ ಆರೋಪಿ ಪವನ್ ಜಾಗಿರ್ದಾರ್ ಮತ್ತವನ ಬೆಂಬಲಿಗರನ್ನ ಅರೆಸ್ಟ್ ಮಾಡಬೇಕು ಅಂತಾ ಡಿಸಿಪಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಶ್ರೀನಿವಾಸುಲು, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಓದಿ: ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿಗಟ್ಟಿ ಪುಂಡರ ಹುಚ್ಚಾಟ