ಕಲಬುರಗಿ: ನಮ್ಮ ನಿಯೋಗ ರಾಷ್ಟ್ರಪತಿಯನ್ನು ಭೇಟಿಯಾಗಿ ಮಣಿಪುರದ ಸ್ಥಿತಿಗತಿ ಬಗ್ಗೆ ತಿಳಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ಐಚಾನ್ ಶಾಹಿ ಗೆಸ್ಟ್ ಹೌಸ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಣಿಪುರದಲ್ಲಿನ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಪ್ರಾರಂಭದಲ್ಲೇ ಕಂಟ್ರೋಲ್ ಮಾಡಿದ್ದರೆ ಇಷ್ಟೊಂದು ಜೀವ, ಮನೆ, ಆಸ್ತಿ-ಪಾಸ್ತಿಗೆ ಹಾನಿ ಆಗುತ್ತಿರಲಿಲ್ಲ. ತ್ವರಿತ ಕ್ರಮ ತೆಗೆದುಕೊಳ್ಳದ ಕಾರಣ ಇಂತಹ ಕೆಟ್ಟ ಪರಿಸ್ಥಿತಿ ಬಂದಿದೆ ಎಂದರು.
ಜೀವ ಕಳೆದುಕೊಂಡವರ ಕುಟುಂಬದವರಿಗೆ, ಮನೆ, ಆಸ್ತಿ- ಪಾಸ್ತಿ ಕಳೆದುಕೊಂಡವರಿಗೆ ಪುನರ್ವಸತಿ, ಪರಿಹಾರವೂ ವಿಳಂಬವಾಗ್ತಿದೆ. ಇದನ್ನು ಚುರುಕುಗೊಳಿಸಬೇಕು ಎಂದು ಮನವಿ ಮಾಡಿದ್ದೇವೆ. ಸರ್ಕಾರಕ್ಕೆ ರಾಷ್ಟ್ರಪತಿಯವರನ್ನು ಕರೆದು ಈ ಬಗ್ಗೆ ಮಾತನಾಡಬೇಕು ಎಂದು ಬರೆದುಕೊಟ್ಟಿದ್ದೇವೆ. ಆದರೆ ನಮಗೆ ಸರ್ಕಾರದಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ. ಕೇಂದ್ರದ ಬೇಜವಾಬ್ದಾರಿಯಿಂದ ತುಂಬಾ ಸಂಘರ್ಷಗಳಾಗುತ್ತಿವೆ ಎಂದು ಹೇಳಿದರು.
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವಿಚಾರ..: ಮಧ್ಯಪ್ರದೇಶದಲ್ಲೂ ನಾವು ಐದು ಗ್ಯಾರಂಟಿಗಳ ಭರವಸೆ ನೀಡಿದ್ದೇವೆ. ಹೀಗಾಗಿ ಅಲ್ಲಿಯೂ ನಮ್ಮ ಗೆಲುವು ಶತಸಿದ್ಧ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಪ್ರದೇಶ ಅಷ್ಟೇ ಅಲ್ಲ, ಸದ್ಯದಲ್ಲಿ ಚುನಾವಣೆ ನಡೆಯಲಿರುವ ರಾಜಸ್ಥಾನ, ಮೇಘಾಲಯ ಮತ್ತು ಛತ್ತೀಸ್ಗಢ ರಾಜ್ಯದಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ಎಲ್ಲ ರಾಜ್ಯದಲ್ಲಿಯೂ ಒಂದೇ ರೀತಿಯ ಪ್ರಣಾಳಿಕೆ ಇರಲ್ಲ. ಆಯಾ ರಾಜ್ಯದಲ್ಲಿ ಏನು ಅಗತ್ಯವಿದೆಯೋ ಅದನ್ನು ಪ್ರದೇಶ ಕಾಂಗ್ರೆಸ್ ಪಕ್ಷ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನಾವು ಮತ್ತು ಬೊಮ್ಮಾಯಿ ಬೀಗರು, ನಮ್ಮ ಭೇಟಿ ರಾಜಕೀಯ ಪ್ರೇರಿತ ಅಲ್ಲ: ಶಾಮನೂರು ಶಿವಶಂಕರಪ್ಪ
ತಮಿಳುನಾಡು ಅಬಕಾರಿ ಸಚಿವರ ಬಂಧನಕ್ಕೆ ಖಂಡನೆ: ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಧ್ಯರಾತ್ರಿ ಕಾರ್ಯಚರಣೆ ನಡೆಸಿ ತಮಿಳುನಾಡು ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಇಡಿ ಬಂಧಿಸಿದ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವರಾದವರು ಎಲ್ಲಿಗಾದ್ರೂ ಓಡಿ ಹೋಗ್ತಿದ್ರಾ, ಮಧ್ಯರಾತ್ರಿ ಬಂಧನ ಮಾಡೋ ಅರ್ಜನ್ಸಿ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿನ ಹೀನಾಯ ಸೋಲು ಹಾಗೂ ವಿರೋಧ ಪಕ್ಷಗಳು ಒಟ್ಟುಗೂಡುತ್ತಿರುವುದನ್ನು ಸಹಿಸಲು ಕೇಂದ್ರ ಬಿಜೆಪಿ ನಾಯಕರಿಗೆ ಆಗುತ್ತಿಲ್ಲ. ಹೀಗಾಗಿ ಸೇಡಿನ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರ ಸಿಬಿಐ, ಇಡಿ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳಿಗೆ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಸಾಧ್ಯವಾದಷ್ಟು ವಿರೋಧ ಪಕ್ಷದ ನಾಯಕರುಗಳನ್ನು ಬೆದರಿಸಿ ಹತ್ತಿಕ್ಕುವ ಕುತಂತ್ರಕ್ಕೆ ಬಿಜೆಪಿ ಮುಂದಾಗಿಗೆ ಎಂದು ಖರ್ಗೆ ಆರೋಪಿಸಿದರು.