ಕಲಬುರಗಿ: ಬಿಎಸ್ವೈ ಸಂಪುಟಕ್ಕೆ ಹತ್ತು ಶಾಸಕರ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಯಾರನ್ನು ಸಚಿವರನ್ನಾಗಿ ಮಾಡಬೇಕು ಅನ್ನೋದು ಅವರ ಪಕ್ಷದ ಆಂತರಿಕ ವಿಚಾರ, ಎಲ್ಲಿಯವರೆಗೆ ನಮ್ಮಲ್ಲಿದ್ರೋ ಅವರು ನಮ್ಮವರಾಗಿದ್ರು, ಯಾವಾಗ ಅವರು ನಮ್ಮ ಪಕ್ಷ ತೊರೆದು ಬೇರೆ ಪಕ್ಷ ಸೇರಿದ್ರೋ ಅವರನ್ನು ಸಚಿವರನ್ನಾಗಿ ಮಾಡೋದು ಬಿಡೋದು ಆ ಪಕ್ಷದ ನಾಯಕರಿಗೆ ಬಿಟ್ಟ ವಿಚಾರವೆಂದು ತಿಳಿಸಿದರು.
ಇನ್ನ ಕಲಬುರಗಿ ಜಿಲ್ಲೆಗೆ ಸಿಎಂ ಸಂಪುಟದಲ್ಲಿ ಅನ್ಯಾಯವಾಗಿದೆ ಅನ್ನೋ ಕೂಗಿಗೆ ಧ್ವನಿಗೂಡಿಸಿದ ಖರ್ಗೆ, ಇದನ್ನ ಓಟು ಕೊಟ್ಟವರು ಕೇಳಬೇಕು. ಆ ಪಕ್ಷವನ್ನು ಪ್ರತಿನಿಧಿಸುವ ಶಾಸಕರು ಕೇಳಬೇಕು. ಪಕ್ಷದ ಮೇಲೆ, ಮುಖಂಡರ ಮೇಲೆ ಜನಪ್ರತಿನಿಧಿಗಳು ಒತ್ತಡ ತರಬೇಕು, ಇಲ್ಲವೇ ಆ ಪಕ್ಷದವರು ಅರ್ಥ ಮಾಡಿಕೊಂಡು ರಾಜ್ಯದ ಯಾವಾವ ಭಾಗಕ್ಕೆ ಅಭಿವೃದ್ಧಿ ವಿಚಾರವಾಗಿ ಎಷ್ಟು ಒತ್ತು ಕೊಡಬೇಕು ಅನ್ನೋದು ಸರ್ಕಾರಕ್ಕೆ ತಿಳಿಯಬೇಕು. ಬಿಜೆಪಿ ನಾಯಕರು ಸಂಪುಟ ವಿಸ್ತರಣೆಯಲ್ಲಿ ಈ ಭಾಗದ ಮೇಲೆ ಯಾಕೆ ಮುನಿಸಿಕೊಂಡಿದ್ದಾರೋ ಗೊತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಅಂತ ಕೇವಲ ಹೆಸರು ಬದಲಿಸಿದ್ರೆ ಅಭಿವೃದ್ಧಿ ಆಗೋದಿಲ್ಲ, ಈ ಆರು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿ ನಿರೀಕ್ಷಿತ ಅಭಿವೃದ್ಧಿ ಮಾಡಬೇಕಿತ್ತು. ಅದರ ಬಗ್ಗೆ ಅವರಿಗೆ ಚಿಂತೆಯಿಲ್ಲ. ಸಿಎಂ ಯಡಿಯೂರಪ್ಪಗೆ ಆಪರೇಷನ್ ಹೊಸದೇನೂ ಅಲ್ಲ, 2008 ರಲ್ಲೂ ಇದೇ ರೀತಿ ಮಾಡಿ ಸರ್ಕಾರ ರಚಿಸಿದ್ದರು. ಈಗ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡೋಣವೆಂದರು.
ದೆಹಲಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತೆ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ದೆಹಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಲಿದ್ದಾರೆ. ಹಿಂದೆ ದಿಲ್ಲಿ ಅಭಿವೃದ್ಧಿಯಾಗಿದ್ದು ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ, ಸೋನಿಯಾ ಗಾಂಧಿ ಅವರು ಸಾಕಷ್ಟು ಸಹಕಾರ ನೀಡಿದ್ದರು. ಈ ಹಿನ್ನಲೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಪಾಲು ಸಿಗುತ್ತೆ ಅನ್ನುವ ನಿರೀಕ್ಷೆಯಿದೆ. ಶಾ ಸೇರಿದಂತೆ ಅನೇಕ ಪ್ರಭಾವಿಶಾಲಿ ವ್ಯಕ್ತಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆಂದರು.
ಪ್ರಧಾನಿ ಮೋದಿಯಂತು ಅಭಿವೃದ್ಧಿ, ನಿರುದ್ಯೋಗ ಬಗ್ಗೆ ಮಾತಾನಾಡುವುದಿಲ್ಲ. ಬರೀ ಇಂಡಿಯಾ ಪಾಕಿಸ್ತಾನದ ಬಗ್ಗೆ ಮಾತ್ರ ಮಾತಾಡ್ತಾರೆ ಅಂತ ಶಾ ಮತ್ತು ಮೋದಿ ವಿರುದ್ಧ ಕಿಡಿಕಾರಿದ್ರು.
ರಾಮ ಮಂದಿರ ನಿರ್ಮಾಣ ಕುರಿತಂತೆ ಮಾತನಾಡಿದ ಖರ್ಗೆ, ಈಗಾಗಲೇ ಟ್ರಸ್ಟ್ ಮಾಡಿದ್ದಾರೆ. ಸುಪ್ರೀಂ ಕೋಟ್೯ ನಿರ್ದೇಶನದಂತೆ ಕಾರ್ಯಗಳು ನಡೆಯುತ್ತಿವೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ದಲಿತರನ್ನ ಸೇರಿಸುತ್ತೇವೆಂಬ ಕೇಂದ್ರದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ, ದಲಿತರೇನು ಹಿಂದುಗಳಲ್ಲವೇ, ದಲಿತರು ಅಂತಾ ಚುಚ್ಚಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿಯವರು ಹಿಂದೂ ಧರ್ಮವನ್ನ ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದರು.