ಕಲಬುರಗಿ: ಯುವಕ-ಯುವತಿ ಇಬ್ಬರೂ ಪ್ರೀತಿಸಿ ನಗರದ ರಾಮತೀರ್ಥ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೀಗ ಅವರ ಬದುಕು ಅತಂತ್ರವಾಗಿದೆ. ಇವರ ಪ್ರೀತಿಗೆ ಯುವತಿ ಪೋಷಕರು ವಿಲನ್ ಆಗಿದ್ದಾರೆ. ಹೀಗಾಗಿ, ಜೀವ ಭಯದಲ್ಲಿರುವ ಪ್ರೇಮಿಗಳು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಸೆಕೆಂಡ್ ಸೆಮಿಸ್ಟರ್ ಓದುತ್ತಿದ್ದ ಸಹನಾ ಮತ್ತು ಬಿಕಾಂ ಮುಗಿಸಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಸಚಿನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಪ್ರೀತಿ ಮುಂದುವರಿಸಿದ್ದು ಸಹನಾಳನ್ನು ಆಕೆಯ ಪೋಷಕರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿರುವ ಅಜ್ಜನ ಮನೆಯಲ್ಲಿ ಬಿಟ್ಟಿದ್ದಾರೆ. ನಂತರ, ಸಚಿನ್‌ನನ್ನು ಊರಿಗೆ ಕರೆಸಿಕೊಂಡು ಅಲ್ಲಿಂದ ಇಬ್ಬರೂ ಓಡಿ ಹೋಗಿ, ಆಗಸ್ಟ್ 15 ರಂದು ಕಲಬುರಗಿಯ ರಾಮತೀರ್ಥ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇತ್ತ ಸಹನಾ ಪೋಷಕರು ಆಕೆ ಓದುತ್ತಿರುವ ಕಾಲೇಜಿನಿಂದ ಮಿಸ್ಸಿಂಗ್ ಆಗಿದ್ದಾಳೆಂದು ಮೊದಲು ಕಲಬುರಗಿ ನಗರ ಪೊಲೀಸ್ ಠಾಣೆಯಲ್ಲಿ ಮತ್ತು ಬಸವನಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳನ್ನು ಸಚಿನ್ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆಂದು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರವಾಗಿ ಪೊಲೀಸರು ಸಚಿನ್ ಮತ್ತು ಸಹನಾಳಿಗೆ ಕರೆ ಮಾಡಿ ನೀವು ವಾಪಸ್ ಬನ್ನಿ, ನಾವು ಸಂಧಾನ ಮಾಡುವುದಾಗಿ ಹೇಳಿದ್ದಾರೆ. ಪೊಲೀಸರ ಮಾತಿಗೆ ಒಪ್ಪದ ಪ್ರೇಮಿಗಳು ಇದೀಗ ಸಂಧಾನಕ್ಕೆ ಬಾರದೇ ಊರೂರು ಅಲೆದಾಡುತ್ತಿದ್ದಾರೆ.
ಅಂತರ್ಜಾತಿಯಾದರೂ ನಾವಿಬ್ಬರು ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದೇವೆ. ಈಗ ನಮ್ಮ ಪೋಷಕರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಬೇಕೆಂದು ಕಲಬುರಗಿಯ ಎಸ್ಪಿ ಮತ್ತು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಾವುತರು, ಕಾವಾಡಿಗರ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಸಚಿವ ಎಸ್.ಟಿ.ಸೋಮಶೇಖರ್