ಕಲಬುರಗಿ: ಲಾಕ್ಡೌನ್ನಿಂದ ಮೊದಲೇ ಜನರು ಕಂಗಾಲಾಗಿದ್ದಾರೆ. ದಿನದ ಕೂಲಿಯನ್ನೇ ನಂಬಿ ಬದುಕುತ್ತಿದ್ದ ಜನರು ಮನೆಯಲ್ಲಿ ಅಕ್ಕಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳಿಲ್ಲದೆ ಕಷ್ಟಪಡುತ್ತಿದ್ದಾರೆ. ಇಷ್ಟಾದರೂ ಈ ಲಾಕ್ಡೌನ್ ನಡುವೆ ನ್ಯಾಯಬೆಲೆ ಅಂಗಡಿಯ ಅಕ್ಕಿಯನ್ನು ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ.
ಹೀಗೆ ಅಕ್ರಮವಾಗಿ ಸಾಗಿಸುತ್ತಿದ್ದ ನ್ಯಾಯಬೆಲೆ ಅಂಗಡಿಯ ಅಕ್ಕಿಯನ್ನು ತಡೆಯುವಲ್ಲಿ ಜೇವರ್ಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಜೇವರ್ಗಿ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರ ನೇತೃತ್ವದಲ್ಲಿ ನಿಖರ ಮಾಹಿತಿ ಮೇರೆಗೆ ಜೇವರ್ಗಿ ಶಹಪುರ್ ರಾಜ್ಯ ಹೆದ್ದಾರಿ ಮುದುಗಲ್ ಕ್ರಾಸ್ ಬಳಿ ತೆರಳಿದ ಪೊಲೀಸರು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ತಡೆಹಿಡಿದಿದ್ದಾರೆ. ಅಲ್ಲದೆ ಲಾರಿಯಲ್ಲಿದ್ದ ಸುಮಾರು 21 ಟನ್ಗೂ ಹೆಚ್ಚು ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.