ಕಲಬುರಗಿ: ಗೌರವಧನ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಕಲಬುರಗಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ವೆಂಕಟೇಶ ದೇಶಪಾಂಡೆ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶುಕ್ರವಾರ ಸಂಜೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಬಳಿ ಇರುವ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಅಧಿಕಾರಿ ವೆಂಕಟೇಶ ದೇಶಪಾಂಡೆ, ಜೇವರ್ಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಅಧಿಕಾರಿ ನಾನಾಗೌಡ ಹೊನ್ನಳ್ಳಿ, ಕಚೇರಿಯ ಎಫ್‌ಡಿಸಿ ಅಂಬರೇಶ ನಾಯಕ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಪಂ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುರಾಜ ಹೇರೂರ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುರಾಜ ಕೂಡಾ ವಿಕಲಚೇತನ ವ್ಯಕ್ತಿಯಾಗಿದ್ದು, ಇತರೇ ವಿಕಲಚೇತನರ ಪುನರ್ವಸತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ತಿಂಗಳಿಗೆ 9 ಸಾವಿರ ರೂ. ಗೌರವ ಧನ ನೀಡುತ್ತಿದೆ. ತನ್ನ 8 ತಿಂಗಳ ಗೌರವಧನ ಮಂಜೂರು ಮಾಡಲು 10 ಸಾವಿರ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಲಂಚದ ಹಣ ಪಡೆಯುವಾಗ ಟ್ರಾಪ ಮಾಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಯವರ ಈ ಯಶಸ್ವಿ ಕಾರ್ಯಾಚರಣೆಗೆ ಕಲಬುರಗಿ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕ ಎ.ಆರ್. ಕರ್ನೂಲ್ ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ.
ಲೋಕಾಯಕ್ತ ಬಲೆಗೆ ಬಿದ್ದ ಎಫ್ಡಿಎ ಅಧಿಕಾರಿ: ವಿಯಯನಗರದ ಮತ್ತೊಂದು ಪ್ರಕರಣದಲ್ಲಿ ಜಮೀನಿನ ಪಹಣಿ ತಿದ್ದುಪಡಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಎನ್ನುವವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚದ 65 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಲಕ್ಕಪ್ಪ ಅವರ ಜಮೀನಿನ ಪಹಣಿ ತಿದ್ದುಪಡಿ ಮಾಡಲು ನ್ಯಾಯಾಲಯ ಆದೇಶ ಮಾಡಿತ್ತು. ನ್ಯಾಯಾಲಯ ನಿರ್ದೇಶನದ ಮೇರೆಗೆ ಪಹಣಿ ತಿದ್ದುಪಡಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆದರೂ ಪಹಣಿ ತಿದ್ದುಪಡಿಗೆ ಸತಾಯಿಸಿದ್ದ ವೆಂಕಟಸ್ವಾಮಿ ತಿದ್ದುಪಡಿ ಮಾಡಲು 70 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಅಸಿಸ್ಟೆಂಟ್ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ: ಬೆಂಗಳೂರಿನ ಈ ಪ್ರಕರಣದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟು ಲಂಚದ ಹಣ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಮಧ್ಯವರ್ತಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆಗರ ಬೆಸ್ಕಾಂ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್ ಸಂತೋಷ್ ಹಾಗೂ ಮಧ್ಯವರ್ತಿ ಮಲ್ಲಿಕಾರ್ಜುನ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಸೆರೆ ಹಿಡಿದಿದ್ದರು.
ಇದನ್ನೂ ಓದಿ: ಬೆಂಗಳೂರು-ವಿಜಯನಗರದಲ್ಲಿ ಲೋಕಾಯುಕ್ತ ದಾಳಿ.. ಎಫ್ಡಿಒ-ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಸೇರಿ ಮೂವರ ಬಂಧನ