ಕಲಬುರಗಿ: ಲಾಕ್ಡೌನ್ ವೇಳೆ ತುರ್ತು ಅಗತ್ಯವಿರುವ ಜನರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪಾಸ್ ವಿತರಿಸಿದೆ. ಆದರೆ ಕಲಬುರಗಿಯಲ್ಲಿ ನಕಲಿ ಪಾಸ್ಗಳ ಹಾವಳಿ ಹೆಚ್ಚಾಗಿದ್ದು, ಆ ಪಾಸ್ಗಳನ್ನು ತೋರಿಸಿ ಕೆಲವರು ರಸ್ತೆಗಳಲ್ಲಿ ಬೇಕಾಬಿಟ್ಟಿ ಅಡ್ಡಾಡುತ್ತಿದ್ದಾರೆ.

ಕಲಬುರಗಿ ಸೂಪರ್ ಮಾರುಕಟ್ಟೆಯ ಚೌಕ್ನಲ್ಲಿ ವಾಹನ ತಪಾಸಣೆ ವೇಳೆ ನಕಲಿ ಪಾಸ್ಗಳು ಸಿಕ್ಕಿವೆ. ಸಂಚಾರಿ ಪೊಲೀಸರು ತಪಾಸಣೆ ಮಾಡಿದಾಗ ಮೂರು ನಕಲಿ ಪಾಸ್ ಸಿಕ್ಕಿವೆ. ಮೂರು ವಾಹನಗಳನ್ನು ವಶಕ್ಕೆ ಪಡೆದಿರೋ ಪೊಲೀಸರು ಇಬ್ಬರು ವ್ಯಕ್ತಿಗಳನ್ನೂ ವಶಕ್ಕೆ ಪಡೆದಿದ್ದಾರೆ.

ಲಾಕ್ಡೌನ್ನಲ್ಲಿಯೂ ಸಂಚರಿಸಲು ನಕಲಿ ಪಾಸ್ ಸೃಷ್ಟಿ ಮಾಡಿಕೊಳ್ಳಲಾಗಿದೆ. ತುರ್ತು ಅಗತ್ಯವಿದ್ದವರಿಗೆ ಮಾತ್ರ ಪಾಸ್ ನೀಡಿದ್ದರೂ, ಅಂಥವುಗಳನ್ನೂ ನಕಲಿ ಮಾಡಿ, ಕೆಲವರು ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ನಕಲಿ ಪಾಸ್ ಸೃಷ್ಟಿಸಿಕೊಂಡು ಅಡ್ಡಾಡದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.