ಕಲಬುರಗಿ: ಕಳೆದ ಜುಲೈ 2ರಂದು ಇಲ್ಲಿನ ಕನಕನಗರದಲ್ಲಿ ತಡರಾತ್ರಿ ನಡೆದ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸ್ವತಃ ತಾವಾಗಿಯೇ ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಸೋಮಶೇಖರ್ ಅಲಿಯಾಸ್ ಸೋಮು (28), ರಾಹುಲ್ ಕುಲಕರ್ಣಿ ಅಲಿಯಾಸ್ ಡಬ್ಲ್ಯೂ(21) ಬಂಧಿತ ಆರೋಪಿಗಳಾಗಿದ್ದು ಇಬ್ಬರು ಸಹ ಕನಕನಗರದ ನಿವಾಸಿಗಳೆಂದು ತಿಳಿದುಬಂದಿದೆ. ಸ್ವತಃ ತಾವೇ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸಂಗಮನಾಥ ಕಾಲೋನಿ ನಿವಾಸಿಯಾಗಿದ್ದ ಅಪ್ಪಾಸಾಹೇಬ್ ಎಂಬಾತ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ. ಆತ ಜುಲೈ 2ರಂದು ಬೈಕ್ ಮೇಲೆ ಕನಕ ನಗರದ ಖಾಸಗಿ ಶಾಲೆಯ ಪಕ್ಕದಲ್ಲಿ ಹೋಗುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ: ಸದ್ಯ ಪೊಲೀಸ್ ಠಾಣೆಗೆ ತಾವಾಗಿ ಬಂದು ಸರೆಂಡರ್ ಆಗಿರುವ ಆರೋಪಿಗಳಿಬ್ಬರು ಹಳೆ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಸದ್ಯ ಕೊಲೆಗೆ ಬಳಸಲಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಪ್ರಕರಣದ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿನೂತನ ಪ್ರಯತ್ನ : ಸಾರಿಗೆ ಬಸ್‌ನಲ್ಲಿ ಹೈಟೆಕ್ ಲೇಡಿಸ್ ಟಾಯ್ಲೆಟ್