ಕಲಬುರಗಿ : "ಬಿಜೆಪಿ ಬಂಡಲ್ ಹೇಳಿಕೊಂಡು ಓಡಾಡೋ ಪಕ್ಷ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿದ 600 ಭರವಸೆಗಳಲ್ಲಿ ಕೇವಲ 51 ಅನ್ನು ಮಾತ್ರ ಈಡೇರಿಸಿದ್ದಾರೆ. ಈಗ ಕೇಂದ್ರ ಬಜೆಟ್ ಬಗ್ಗೆ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ" ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
"ಅಮೃತಕಾಲದ ಉತ್ತಮ ಬಜೆಟ್, ದೂರದೃಷ್ಟಿಯುಳ್ಳ ಒಳ್ಳೆಯ ಬಜೆಟ್, ಇದರಿಂದ ರಾಷ್ಟ್ರಕ್ಕೆ ಒಳ್ಳೆದಾಗುತ್ತೆ ಅಂತೆಲ್ಲಾ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರದ ಈ ಬಜೆಟ್ ಎಲ್ಲ ಸಮುದಾಯಕ್ಕೂ ಮಾರಕವಾಗಿದೆ. ಕಾರ್ಮಿಕ, ಬಡವರ, ರೈತರ, ಮಹಿಳೆಯರ, ಎಸ್‌ಸಿ, ಎಸ್‌ಟಿ ವಿರೋಧಿ ಬಜೆಟ್" ಎಂದರು.
"ಕಳೆದ ಸಾಲಿನಲ್ಲಿ ಆಹಾರಕ್ಕಾಗಿ 2,88,969 ಕೋಟಿ ರೂ ಮೀಸಲಿಟ್ಟಿದ್ದನ್ನು ಈ ವರ್ಷ 1,97,350 ಕೋಟಿಗೆ ಇಳಿಕೆ ಮಾಡಿದ್ದಾರೆ. ಪಿಎಂ ಕಿಸಾನ್ ಯೋಜನೆಯಲ್ಲೂ ಕಡಿತಗೊಳಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಚಕಾರವೆತ್ತಿಲ್ಲ. ಅಂದಮೇಲೆ ಹೇಗೆ ಇದು ಜನಪರ ಬಜೆಟ್ ಆಗೋಕೆ ಸಾಧ್ಯ?" ಎಂದು ಹೇಳಿದರು.
"ಆಮ್ದಾನಿ ಆಠಾಣೆ, ಖರ್ಚು ರೂಪಯ್ಯ ಅನ್ನೋ ಥರ ಬಿಜೆಪಿ ಮಾಡುತ್ತಿದೆ. ಖರ್ಚು ಮಾಡೋದಕ್ಕೆ ಹಣದ ಮೂಲವೇ ಇಲ್ಲ. ಪೊಳ್ಳು ಘೋಷಣೆ ಮಾತ್ರ ಭರಪೂರ ಮಾಡುತ್ತಾರೆ. ಈ ಸರ್ಕಾರದಲ್ಲಿ ಬಿಚ್ಚಿಡೋದಕ್ಕಿಂತ ಮುಚ್ಚಿಡೋದು ಹೆಚ್ಚು. ಇದು ಭಾರತಿಯ ಜನತಾ ಪಕ್ಷ ಅಲ್ಲ, ಬಂಡಲ್ ಜನತಾ ಪಕ್ಷ. ರಾಜ್ಯದ ಚುನಾವಣೆ ವೇಳೆ ಕೊಟ್ಟ ಭರವಸೆಯಲ್ಲಿ ಶೇ 10 ರಷ್ಟೂ ಈಡೇರಿಸಿಲ್ಲ. ನಮ್ಮ ಪಕ್ಷ 165 ಭರವಸೆಗಳಲ್ಲಿ 158 ಈಡೇರಿಸಿತ್ತು. ಬಿಜೆಪಿ 600ರಲ್ಲಿ ಕೇವಲ 51 ಮಾತ್ರ ಈಡೇರಿಸಿದೆ" ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸಂಕಲ್ಪ ಯಾತ್ರೆ ಅಲ್ಲ, ಜನದ್ರೋಹಿ ಜಾತ್ರೆ: ಇದೇ 17ರಂದು ರಾಜ್ಯದ ಬಜೆಟ್ ಇರುತ್ತೆ. ಅದು ಕೇವಲ ಬಿಜೆಪಿ ಮತ್ತು ಬೊಮ್ಮಾಯಿ ಬಚಾವೋ ಬಜೆಟ್ ಆಗಿರುತ್ತೆ. ಜನರು ಬಿಜೆಪಿಯ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಮೋದಿ, ನಡ್ಡಾ, ಅಮಿತ್ ಶಾ ಕೇಂದ್ರದಿಂದ ಯಾರನ್ನೇ ಕರೆಸಿದರೂ ಇಲ್ಲಿ ನಿಮ್ಮ ಆಟ ನಡೆಯಲ್ಲ. ವಿಜಯ ಸಂಕಲ್ಪ ಯಾತ್ರೆ ಅಲ್ಲ, ಇದು ಜನದ್ರೋಹಿ ಜಾತ್ರೆ. ವಿಜಯ ಸಂಕಲ್ಪ, ಸಂಕಲ್ಪ ಆಗಿಯೇ ಉಳಿಯುತ್ತದೆ. ಬಿಜೆಪಿ ಕನಸು ನನಸಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಹುಡುಕಾಟ ಅಲ್ಲ, ಕ್ಷೇತ್ರ ಆಯ್ಕೆ: ಇದೇ ವೇಳೆ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರವಾಗಿ ಮಾತನಾಡಿ, "ರಾಜ್ಯದ ಮುಂಬೈ ಕರ್ನಾಟಕ, ಕೋಲಾರ ಸೇರಿ ಹಲವೆಡೆಯಿಂದ ಸ್ಪರ್ಧಿಸಲು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಓಡಾಡಲು ತೊಂದರೆ ಅಂತ ಬದಾಮಿ ತೊರೆದು ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕ್ಷೇತ್ರ ಹುಡುಕಾಟ ಅಲ್ಲ, ಕ್ಷೇತ್ರ ಆಯ್ಕೆಯಷ್ಟೇ" ಎಂದು ಸಮರ್ಥಿಸಿಕೊಂಡರು.
ರಮೇಶ ಜಾರಕಿಹೊಳೆ ಸಿಡಿ ಕೇಸ್ ವಿಚಾರವಾಗಿ, "ಸಿಬಿಐ ಯಾವ ಕೇಸ್ ತಗೋಬೇಕು ಎಂದು ಅವರಿಗೆ ಗೊತ್ತಿದೆ. ಎಲ್ಲಾ ದಾಖಲಾತಿಗಳು ಇದ್ದರೆ ಗೃಹ ಸಚಿವರ ಶಿಫಾರಸು ಮಾಡುವ ಅಗತ್ಯ ಏನಿದೆ? ಶಿಫಾರಸು ಮಾಡುತ್ತಿದ್ದಾರೆಂದರೆ ಇವರ ಬಳಿ ಲೋಪ ಇದೆ ಎಂದರ್ಥ. ಬಿಜೆಪಿ ಅವರದು ಏನಿದ್ರೂ ಹಿಟ್ಅಂಡ್ ರನ್ ಅಷ್ಟೇ" ಎಂದರು.
ಇದನ್ನೂ ಓದಿ :ಸರ್ಕಾರ ಬೆನ್ನಿಗಿಲ್ಲದೇ ಕಿಂಗ್ ಪಿನ್ ಆಗಲ್ಲ: ಡಿಕೆ ಶಿವಕುಮಾರ್