ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಕೆಕೆಆರ್‌ಡಿಬಿ ಮಂಡಳಿಯಿಂದ 10 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸ್ಕಿ ಮತ್ತು ಬಸವಕಲ್ಯಾಣ ಬೈ ಎಲೆಕ್ಷನ್ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಬಿದ್ದಿತ್ತು. ಸದ್ಯ ಚುನಾವಣೆ ಮುಗಿದಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ 41 ಶಾಸಕರಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ನೀಡಲು ಹೇಳಲಾಗಿದೆ. ಈ ಬಾರಿ ಕೆಕೆಆರ್‌ಡಿಬಿ ಮಂಡಳಿಗೆ ಸಿಎಂ 1500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. 1,500 ಕೋಟಿ ಅನುದಾನದಲ್ಲಿ ಕೋವಿಡ್ ನಿಯಂತ್ರಣಕ್ಕೆ ಒತ್ತು ಕೊಟ್ಟು ಆಕ್ಸಿಜನ್, ವೆಂಟಿಲೇಟರ್, ವೈದ್ಯಕೀಯ ಉಪಕರಣಗಳ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ವೆಂಟಿಲೇಟರ್ ಇರೋ ಆ್ಯಂಬುಲೆನ್ಸ್‌ಗಳನ್ನ ಆರು ಜಿಲ್ಲೆಗಳಿಗೆ ಒದಗಿಸಲಾಗಿದೆ ಹಾಗೂ ಕೆಕೆಆರ್‌ಡಿಬಿ ವತಿಯಿಂದ 150 ಜಂಬೋ ಆಕ್ಸಿಜನ್ ಸಿಲಿಂಡರ್ ಒದಗಿಸಲಾಗ್ತಿದೆ ಎಂದು ದತ್ತಾತ್ರೇಯ ಪಾಟೀಲ್ ಅವರು ಹೇಳಿದ್ದಾರೆ.
ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವೆವು:
ಕಲಬುರಗಿಯಿಂದ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸರಬರಾಜು ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಪಾಟೀಲ್, ಇಂತಹ ಪ್ರಕರಣಗಳು ಮರುಕಳಿಸಿದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ. ನಮ್ಮ ಜಿಲ್ಲೆಯಿಂದ ಯಾವುದೇ ಕಾರಣಕ್ಕೂ ಆಕ್ಸಿಜನ್ ಸರಬರಾಜು ಆಗಲು ಬಿಡುವುದಿಲ್ಲ. ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ ಬೇಕಾಗುವ ಆಕ್ಸಿಜನ್ ಬಗ್ಗೆ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಖಾಸಗಿ ಆಕ್ಸಿಜನ್ ಘಟಕಗಳ ನಾಲ್ವರು ಮಾಲೀಕರನ್ನು ಸಹ ಕರೆದು ಮಾತುಕತೆ ನಡೆಸುತ್ತೇವೆ ಎಂದು ಪಾಟೀಲ್ ತಿಳಿಸಿದ್ದಾರೆ.