ಕಲಬುರಗಿ: ಮಾಜಿ ಶಾಸಕ ದಿ.ಚಂದ್ರಶೇಖರ ಪಾಟೀಲ ರೇವೂರ ಸ್ಮರಣಾರ್ಥ ಕಲಬುರಗಿಯಲ್ಲಿ ಕಿಡ್ನಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ. ಚಂದ್ರಶೇಖರ ಪಾಟೀಲರ ಜನ್ಮದಿನವಾದ ಇಂದು ನಗರದ ವೀರಶೈವ ವಸತಿ ನಿಲಯದ ಆವರಣದಲ್ಲಿ ನೂತನ ಕಿಡ್ನಿ ಕೇರ್ ಡಯಾಲಿಸಿಸ್ ಕೇಂದ್ರಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು.
ಜರ್ಮನಿಯಿಂದ ಡಯಾಲಿಸಿಸ್ ಯಂತ್ರಗಳನ್ನು ತರಿಸಿಕೊಳ್ಳಲಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಐದು ಬೆಡ್ಗಳ ಡಯಾಲಿಸಿಸ್ ಕೇಂದ್ರವಿದ್ದು, ನಿತ್ಯ 20 ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮಾಡಲು ಉದ್ದೇಶಿಸಲಾಗಿದೆ.
ಪ್ರತಿ ವರ್ಷ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಹುಟ್ಟುಹಬ್ಬದಂದು ಅವರ ಸ್ಮರಣಾರ್ಥ ರೇವೂರ ಅಭಿಮಾನಿ ಬಳಗದಿಂದ ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಬೃಹತ್ ಉದ್ಯೋಗ ಮೇಳ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ದಿ.ಚಂದ್ರಶೇಖರ ಪಾಟೀಲ ಫೌಂಡೇಶನ್ ವತಿಯಿಂದ ಆಯೋಜಿಸುತ್ತಾ ಬರಲಾಗಿದೆ. ಈ ಬಾರಿ ಅತ್ಯುತ್ತಮ ಹೈಟೆಕ್ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸುವ ಮೂಲಕ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಚಿಕಿತ್ಸೆ ನೀಡಲು ರೇವೂರ ಅಭಿಮಾನಿ ಬಳಗ ತೀರ್ಮಾನಿಸಿತ್ತು.
ಇದನ್ನೂ ಓದಿ: ಇಂದು ಶಿವಮೊಗ್ಗಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ