ಕಲಬುರಗಿ: ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ವಸತಿ ಸಮುಚ್ಚಯದಿಂದ ಪರಾರಿಯಾಗಿದ್ದಾನೆ. ಆತ ಕಾಂಪೌಂಡ್ ಹಾರಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್ನಿಂದ ಆರ್ ಡಿ ಪಾಟೀಲ್ ಎಸ್ಕೆಪ್ ಆಗಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರ ಹುಡುಕಾಟದ ನಡುವೆ ಭಾನುವಾರ ರಾತ್ರಿ 10.30 ರಿಂದ ಸೋಮವಾರ ಮಧ್ಯಾಹ್ನ 1.35ರ ತನಕ ಕಲಬುರಗಿಯಲ್ಲಿಯೇ ಇದ್ದ. ಇದೇ ಫ್ಲ್ಯಾಟ್ನಲ್ಲಿರುವ ಕುರಿತು ಜಿಲ್ಲಾ ಪೊಲೀಸರಿಗೆ ಸೋಮವಾರ ಬೆಳಗ್ಗೆ 10.30ಕ್ಕೆ ಖಚಿತ ಮಾಹಿತಿಯೂ ಸಿಕ್ಕಿತ್ತು. ಆದರೆ, ಹೋಗುವ ಮುನ್ನವೇ ಎಸ್ಕೆಪ್ ಆಗಿದ್ದಾನೆ. ಅಪಾರ್ಟ್ಮೆಂಟ್ನ ಹಿಂಬದಿಯ ಕಾಂಪೌಂಡ್ಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಹಾರಿ ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಇಎ ಪರೀಕ್ಷೆ ಹಗರಣದ ಕಿಂಗ್‌ಪಿನ್ ಪಾಟೀಲ್, ಈ ಹಿಂದೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಕೂಡ ಹೌದು. ಸಿಐಡಿ ವರದಿ ಕೂಡ ಒಪ್ಪಿಸಿದೆ. ಪಿಎಸ್ಐ ಅಕ್ರಮ ಮಾಸುವ ಮುನ್ನವೇ ಈಗ ಕೆಇಎ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ನೀಡಿದ ಆರೋಪ ಕೂಡ ಆರ್‌ಡಿ ಪಾಟೀಲ್ ಮೇಲಿದೆ. ಪ್ರಕರಣದ ಹಿನ್ನೆಲೆ ಬಂಧಿಸಲಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಪೊಲೀಸರಿಂದ ತೆಲೆಮರೆಸಿಕೊಂಡಿರುವ ಆರೋಪಿ ಆರ್‌ಡಿ ಪಾಟೀಲ್, ಹೊರಗಿನಿಂದಲೇ ಜಾಮೀನಿಗೆ ಯತ್ನಿಸುತ್ತಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಇಂದು ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಆರ್ ಡಿ ಪಾಟೀಲ್ ಎಸ್ಕೇಪ್ ಕೇಸ್ ಕುರಿತಾಗಿ ಕಲಬುರಗಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಪರೀಕ್ಷೆ ಅಕ್ರಮ ಪ್ರಕರಣ ಕುರಿತು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ. ಆರ್ ಡಿ ಪಾಟೀಲ್ ಸಾಮಾನ್ಯದವನಲ್ಲ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ನಡೆದಾಗ ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ ನಡೆದಿದೆ. ಪೊಲೀಸರ ವೈಫಲ್ಯದಿಂದ ಪಾಟೀಲ್ ಎಸ್ಕೇಪ್ ಆಗಿದ್ದಾನೆ. ಆತನಿಗೆ ಸರ್ಕಾರದ ಘಟಾನುಘಟಿ ನಾಯಕರ ಸಂಪರ್ಕವಿದೆ. ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಈ ಕೇಸ್ ಅನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.