ಕಲಬುರಗಿ: ದೇಶದ್ರೋಹಿಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಲು ಸಿದ್ಧತೆ ನಡೆಯುತ್ತಿದೆ. ನಿಮ್ಮದೇ ಸರ್ಕಾರವಿದೆ, ನೀವು ಯಾವ ಪ್ರಶಸ್ತಿ ಬೇಕಾದರೂ ಕೊಟ್ಟುಕೊಳ್ಳಿ ಎಂದು ಕನ್ಹಯ್ಯ ಕುಮಾರ್ ಕೇಂದ್ರದ ವಿರುದ್ಧ ಹರಿಹಾಯ್ದರು.
ಸಂವಿಧಾನ ರಕ್ಷಣ ಯುವ ಜನತೆ ಹೊಣೆ ಕಾರ್ಯಕ್ರಮಕ್ಕೆ ಕನ್ಹಯ್ಯ ಕುಮಾರ್ ಭಾಗಿಯಾಗುವ ಹಿನ್ನಲೆ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಿಷೇಧಾಜ್ಞೆ, ವಿಶ್ವೇಶ್ವರಯ್ಯ ಭವನದಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಇದರಿಂದ ಸಂಜೆ ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕನ್ಹಯ್ಯ ಕುಮಾರ್, ತಮ್ಮ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ವಿಶ್ವವಿದ್ಯಾಲಯ ಕ್ರಮ ಖಂಡಿಸಿದರು. ಯಾವ ವಸ್ತುವನ್ನು ಎಷ್ಟು ಒತ್ತಿ ಹಿಡಿಯುತ್ತೀರೋ ಅಷ್ಟೇ ವೇಗದಲ್ಲಿ ನಿಮ್ಮ ಮೇಲೆ ಅಪ್ಪಳಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಬ್ರಿಟೀಷರ ಒಡೆದಾಳುವ ನೀತಿಯನ್ನು ಅನುರಿಸುತ್ತಿದ್ದಾರೆ. ಹಿಂದೂಸ್ತಾನವನ್ನು ಮತ್ತೊಮ್ಮೆ ಇಬ್ಭಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಭಗತ್ ಸಿಂಗ್ ತತ್ವಗಳನ್ನು ಅನುರಸಿದ ಅಂಬೇಡ್ಕರ್ ಅಂಥವರನ್ನು ದೇಶದ್ರೋಹಿ ಅಂತಾರೆ. ಆದರೆ, ದೇಶದ್ರೋಹಿ(ಗದ್ದಾರ್)ಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡೋ ಯತ್ನ ನಡೆದಿದೆ. ನಿಮ್ಮದೇ ಸರ್ಕಾರವಿದೆ, ಏನು ಬೇಕಾದರೂ ಪ್ರಶಸ್ತಿ ಕೊಟ್ಟುಕೊಳ್ಳಿ ಎಂದರು.
ಜವಹರಲಾಲ್ ನೆಹರೂ ವಿವಿಯನ್ನು ಇವರು ದೇಶದ್ರೋಹಿ ವಿವಿ ಅಂತಾರೆ. ಅಂತಹ ವಿವಿಯ ವಿದ್ಯಾರ್ಥಿಗೆ ನಿನ್ನೆ ಜಗತ್ತಿನ ಅತ್ಯುನ್ನತ ನೋಬೆಲ್ ಪ್ರಶಸ್ತಿ ಸಿಕ್ಕಿದೆ. ಇವರು ಯಾರನ್ನು ದೇಶದ್ರೋಹಿಗಳು ಅಂತಾ ಪಟ್ಟ ಕಟ್ಟುತ್ತಾರೋ ಅವರಿಗೆ ಉನ್ನತ ಪ್ರಶಸ್ತಿಗಳು ಸಿಗುತ್ತಿವೆ. ನಾವು ನಿಮ್ಮ ಇಡಿ, ಸಿಬಿಐಗಳಿಗೆ ಹೆದರೋದಿಲ್ಲ ಎಂದರು.
ದಿನ ಬೆಳಗಾದರೆ ಯುದ್ಧದ ಬಗ್ಗೆ ಮಾತನಾಡುವವರಿಗೆ ಬುದ್ಧನ ಬಗ್ಗೆ ಮಾತನಾಡೋ ನೈತಿಕತೆಯಿಲ್ಲ. ದಿನದ 24 ಗಂಟೆ ಮೋದಿ ಯುದ್ಧದ ಬಗ್ಗೆ ಚಿಂತೆ ಮಾಡುತ್ತಾರೆ. ಇಂಥವರಿಗೆ ಬುದ್ಧನೊಂದಿಗೆ ಕೊಡು-ತೆಗೆದುಕೊಳ್ಳೋದೇನಿದೆ. ದೇಶದಲ್ಲಿ ಮೋದಿ ಪರ ಅಲೆಯಿದೆ ಎಂದು ಬಿಂಬಿಸಲಾಗುತ್ತಿದೆ. ದೇಶದಲ್ಲಿ ಪರ್ಯಾಯ ನಾಯಕರಿದ್ದರೂ ಇಲ್ಲವೆನ್ನುವಂತೆ ಬಿಂಬಿಸುವ ಯತ್ನ ನಡೆದಿದೆ. ಅಬಕಿ ಬಾರ್ ಅಡ್ವಟೈಸ್ಮೆಂಟ್ ಸರ್ಕಾರ್ ಎಂದು ಮೋದಿ ಸರ್ಕಾರವನ್ನು ಲೇವಡಿ ಮಾಡಿದರು.