ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಮಾಡಿ ಅದರ ಸಂಭ್ರಮವನ್ನು ಈ ಕಲ್ಯಾಣ ಕರ್ನಾಟಕ ಉತ್ಸವದ ಮೂಲಕ ಆಚರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಚರಿತ್ರೆ ಇತಿಹಾಸ ಈ ಉತ್ಸವ ಮೂಲಕ ಜನರ ಹಾಗೂ ನೋಡುಗರ ಕಣ್ಮುಂದೆ ಬಂದು ಹೋಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುಲಬರ್ಗಾ ವಿ.ವಿ. ಆವರಣದಲ್ಲಿ ಪ್ರಧಾನ ವೇದಿಕೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-2023ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ದೇಶಕ್ಕೆ ಅಮೃತ ಕಾಲ ಬಂದಂತೆ ಈ ಕಲ್ಯಾಣ ಕರ್ನಾಟಕ ಭಾಗಕ್ಕೂ ಕೂಡಾ ಅಮೃತಕಾಲ ಬಂದಿದೆ. ಈ ಭಾಗಕ್ಕೆ ಸ್ವಲ್ಪ ತಡವಾಗಿ ಸ್ವಾತಂತ್ರ್ಯ ಬಂದಿದ್ದರೂ ಕೆಚ್ಚದೆಯ ಹೋರಾಟದಿಂದ ಎರಡೆರಡು ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಿದವರಾಗಿದ್ದಾರೆ. ರಮಾನಾಂದ ತೀರ್ಥರು ಸೇರಿದಂತೆ ಅಸಂಖ್ಯಾತ ಇಲ್ಲಿನ ಹೋರಾಟಗಾರರ ತ್ಯಾಗ, ಬಲಿದಾನ ಮಾಡಿದ ವೀರರಿಗೆ ವಿಶೇಷ ನಮನ ಸಲ್ಲಿಸುವುದಾಗಿ ಹೇಳಿದರು.
ಈ ಭಾಗ ಬಹಳ ವರ್ಷ ಹಿಂದುಳಿದಿತ್ತು. ಈ ಭಾಗದ ಸಮಗ್ರ ಅಭಿವೃದ್ದಿಗೆ ಸಂವಿಧಾನದ ಆರ್ಟಿಕಲ್ 371(ಜೆ) ಆಗಿರಲಿಲ್ಲ. ಆ ನಂತರ ತಿದ್ದುಪಡಿ ಆದರೂ ಕೂಡಾ ನಾಯಕತ್ವದಲ್ಲಿ ಇಚ್ಛಾ ಶಕ್ತಿ ಕೊರತೆಯಿಂದ ಈ ಭಾಗ ಅಭಿವೃದ್ದಿಯಾಗಿರಲಿಲ್ಲ. ಈ ಭಾಗದ ಯುವಕರಿಗೆ ಯಾವುದೇ ಕೆಲಸ ಮಾಡುವ ಶಕ್ತಿ ಇದೆ. ರೈತರಿಗೆ ಬಂಗಾರದ ಬೆಳೆ ಬೆಳೆಯುವ ಶಕ್ತಿ ಇದೆ. ಕಾರ್ಮಿಕರಿಗೆ ದುಡಿಯುವ ಶಕ್ತಿ ಇದೆ. ಈ ಭಾಗದಲ್ಲಿ ಸಂಪದ್ಭರಿತ ನೈಸರ್ಗಿಕ ಶಕ್ತಿ. ಆದರೂ ಇಚ್ಛಾ ಶಕ್ತಿಯ ಕೊರತೆಯಿಂದ ಸುಮಾರು ವರ್ಷಗಳ ಕಾಲ ಹಿಂದುಳಿದಿತ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕದ ಭಾಗದ ಜನರು ಹಿಂದುಳಿಯಲಿ ಎನ್ನುವ ಧೋರಣೆ ಈ ಭಾಗದ ಜನರ ಹಿಂದುಳಿಯುವಿಕೆಗೆ ಕಾರಣವಾಗಿತ್ತು. ಆದರೆ,ಈ ಭಾಗದಲ್ಲಿ ಮಂತ್ರಿ ಮಂಡಳ ಸಭೆ ನಡೆಸಿ ಅಭಿವೃದ್ದಿಗೆ ನಾಂದಿ ಹಾಡಿದವರು ಮಾಜಿ ಸಿಎಂ ಯಡಿಯೂರಪ್ಪನವರು. ಬೀದರ್ - ಗುಲಬರ್ಗಾ ರೈಲ್ವೆ ಲೈನ್ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಅವರ ಕೊಡುಗೆಯಾಗಿದೆ ಎಂದ ಅವರು, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಸಹ ಅವರಿಗೆ ಸಲ್ಲುತ್ತದೆ. ಈಗ ನಾನು ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಲು ಮಂಡಳಿಗೆ ರೂ 3,000 ಕೋಟಿ ನೀಡುವುದಾಗಿ ಹೇಳಿ ಈ ಅನುದಾನದಲ್ಲಿ ಮ್ಯಾಕ್ರೋ ಮತ್ತು ಮೈಕ್ರೋ ಯೋಜನೆಯಡಿ ತಲಾ 1500 ಕೋಟಿ ರೂ. ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಸನ್ನತಿ ಅಭಿವೃಧ್ದಿಗೆ ಕ್ರಮ, ಬೀದರ್ ಹಾಗೂ ಮಳ ಖೇಡ ಕೋಟೆ ಅಭಿವೃದ್ಧಿಗೆ ತಲಾ ರೂ 50 ಕೋಟಿ ಹಾಗೂ ದತ್ತಾತ್ರೇಯ ದೇವಸ್ಥಾನದ ಅಭಿವೃದ್ದಿಗೆ ರೂ 57 ಕೋಟಿ ಅನುದಾನ ಘೋಷಣೆ ಮಾಡಿದ್ದೇನೆ. ಈ ಭಾಗದ ತಾಂಡಾ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 50,000 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಇದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ ಎಂದರು.
ಈ ಭಾಗದ ಸಮಗ್ರ ಅಭಿವೃದ್ದಿ ನನ್ನ ಕನಸು: ಔದ್ಯೋಗಿಕ ಅಭಿವೃದ್ದಿ ಹಾಗೂ ಸಮಗ್ರ ನೀರಾವರಿ ಒದಗಿಸುವ ಮೂಲಕ ಈ ಭಾಗದ ರೈತರ ಬಾಳಿಗೆ ಬೆಳಕಾಗುವ ಕನಸು ನನ್ನದು. ಈ ಕಾರ್ಯದಲ್ಲಿ ಹೋಗುವಾಗ ಹಲವರು ನನ್ನ ಟೀಕೆ ಮಾಡಬಹುದು. ಆದರೆ, ಆ ಬಗ್ಗೆ ನಾನು ಯೋಚಿಸದೆ ಅಭಿವೃದ್ದಿ ಮಾಡುವುದಾಗಿ ಸಿಎಂ ಅಭಯ ನೀಡಿದರು. ಆಶಯ ನುಡಿಗಳನ್ನಾಡಿದ ಕೆಕೆಆರ್ ಡಿಬಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರು ಮಾತನಾಡಿ, ಕಲ್ಯಾಣ ಕರ್ನಾಟಕ ಉತ್ಸವ ಶರಣರ, ಸೂಫಿ, ಸಂತರ ನಾಡಿನಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ಮಾಜಿ ಸಿಎಂ ಯಡಿಯೂರಪ್ಪನವರು ಹೈದರಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿ ಕೆಕೆಆರ್ ಡಿಬಿ ಗೆ ರೂ 1,500 ಕೋಟಿ ಅನುದಾನವನ್ನು ಘೋಷಿಸಿದರು. ಆ ನಂತರ ಅಧಿಕಾರಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ರೂ 1,500 ಕೋಟಿಯಿಂದ ರೂ 3,000 ಕೋಟಿಗೆ ಏರಿಸಿ ಈ ಭಾಗದ ಅಭಿವೃದ್ದಿ ಕ್ರಾಂತಿ ಮಾಡಿದರು. ಕಲ್ಯಾಣದಲ್ಲಿ ಅಣ್ಣ ಬಸವಣ್ಣನಂತೆ ಕ್ರಾಂತಿ ಮಾಡಿದ್ದಾರೆ ಎಂದರು.
ಈ ಸಲದ ಬಜೆಟ್ ನಲ್ಲಿ ರೂ 5,000 ಕೋಟಿ ಅನುದಾನ ಘೋಷಿಸಿ ಈ ಭಾಗಕ್ಕೆ ಹೆಚ್ಚಿನ ಕಾಳಜಿ ತೋರಿಸಿದ್ದಾರೆ. ಈ ಹಿಂದಿನ ಯಾವ ರಾಜಕಾರಣಿಗಳು ಬೊಮ್ಮಾಯಿ ಅವರಷ್ಟು ಬದ್ಧತೆ ತೋರಿಸಿರಲಿಲ್ಲ. ಈಗ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವ ಆಯೋಜನೆಗೆ ಕೂಡಾ ಸಿಎಂ ಅವರ ಮಾರ್ಗದರ್ಶನ ನೀಡಿದ್ದಾರೆ. ಅವರು ಮತ್ತೊಮ್ಮೆ ಸಿಎಂ ಆದಾಗ ಮಾತ್ರ ಕಲಬುರಗಿಯಲ್ಲಿ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ ಎಂದರು.
ಸಿಎಂ ನವ ಕರ್ನಾಟಕದ ಕನಸು ಕಂಡಿದ್ದಾರೆ: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ರೂ 3.09 ಲಕ್ಷ ಕೋಟಿ ಬಜೆಟ್ ನಲ್ಲಿ ಸಿಎಂ ನವ ಕರ್ನಾಟಕದ ಕನಸು ಕಂಡಿದ್ದಾರೆ. ಈ ಭಾಗಕ್ಕೆ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಮುಂಬರುವ ದಿನಗಳಲ್ಲಿ ತೊಡೆದು ಹಾಕಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ' ಕಲ್ಯಾಣ ದರ್ಶನ' ಸ್ಮರಣ ಸಂಚಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ವೇದಿಕೆಯ ಮೇಲೆ ನಿಜಶರಣ ಅಂಬಿದರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಶಾಸಕರಾದ ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಶಾಸಕ ಶಶಿಲ್ ನಮೋಶಿ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್, ರಾಜ್ಯ ದ್ವಿದಳ ಧಾನ್ಯ ಮಂಡಳಿ ಅಧ್ಯಕ್ಷ ವಿದ್ಯಾಸಾಗರ್ ಶಹಾಬಾದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಮತ್ತು ಈಶಾನ್ಯ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಅನುಪಮ್ ಅಗರವಾಲ್, ಕೆ.ಕೆ..ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಇಶಾ ಪಂತ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಗರಿಮಾ ಪನ್ವಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಕೇವಲ ಭರವಸೆ ನೀಡುವ ಸರ್ಕಾರ: ಸಿಎಂ ಬೊಮ್ಮಾಯಿ ಲೇವಡಿ