ಕಲಬುರಗಿ: ಉತ್ತರ ಕರ್ನಾಟಕದವರೇ ಆದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬೀದರ್ ಹಾಗೂ ಕೊಪ್ಪಳ ಜಿಲ್ಲೆಗೆ ತಲಾ ಒಂದು ಸಚಿವ ಸ್ಥಾನ ಕೊಟ್ಟಿದ್ದು ಬಿಟ್ಟರೆ, ಈ ಭಾಗದ ಬೆಟ್ಟದಂತ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದ ಕಾರಣ ಸಹಜವಾಗಿಯೇ ಈ ಭಾಗದ ಜನರಲ್ಲಿ ಅತೀವ ನಿರಾಸೆ ಮೂಡಿಸಿದೆ.
ಹಿಂದೊಮ್ಮೆ ಏಳು ಸಚಿವರು ಇದ್ದ ಕಲ್ಯಾಣ ಕರ್ನಾಟಕದಲ್ಲಿ ಈಗ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕೊಪ್ಪಳ ಹೊರತುಪಡಿಸಿದರೆ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಬೀದರ್ ಜಿಲ್ಲೆಯ ಔರಾದ್ ಶಾಸಕ ಪ್ರಭು ಚವ್ಹಾಣ್ ಇವರಿಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಎಂದು ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆರಳಿದ ಕಲಬುರಗಿ ಜನ: ಒಬ್ಬ ಸಂಸದರು, ಐದು ಜನ ಶಾಸಕರು ಹಾಗೂ ಮೂರು ಜನ ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾದ ಕಲಬುರಗಿ ಜಿಲ್ಲೆಗೆ ಈ ಬಾರಿಯೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದು ಜನರಲ್ಲಿ ಅತೀವ ನಿರಾಸೆ ಮೂಡಿಸಿದೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ನೊಂದಿದ್ದ ಕಲಬುರಗಿ ಜನತೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಸುಭಾಷ ಗುತ್ತೇದಾರ, ಮಾಲೀಕಯ್ಯ ಗುತ್ತೇದಾರ ಅವರು ಸಚಿವರಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿರುವ ಕಲ್ಯಾಣ ಕರ್ನಾಟಕದಲ್ಲಿ ರಾಜಕೀಯ ವ್ಯತಿರಿಕ್ತ ಬದಲಾವಣೆಗಳಾದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನೋದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಸಾಧ್ಯ: ಮೈಸೂರು ಪ್ರಾಂತ್ಯ, ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ಸರ್ಕಾರ ನೀಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ರಾಜ್ಯ ಸರ್ಕಾರದಿಂದ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಸಾಧ್ಯ. ತೆಲಂಗಾಣ ಮಾದರಿಯಲ್ಲಿ ನಮಗೆ ಪ್ರತ್ಯೇಕ ರಾಜ್ಯ ಕೊಡಿ ಅಂತ ಪ್ರತ್ಯೇಕ ರಾಜ್ಯದ ಕೂಗು ಈ ಭಾಗದ ಜನರು ಮತ್ತೆ ಮೊಳಗಿಸಲು ಆರಂಭಿಸಿದ್ದಾರೆ.
ಒಟ್ಟಾರೆ ಕುಂತಿ ಪುತ್ರರಿಗೆ ರಾಜ್ಯವಿಲ್ಲ ಎಂಬಂತೆ ಈ ಭಾಗದ ಶಾಸಕರಿಗೆ ಮಂತ್ರಿಪಟ್ಟ ಎಟುಕದ ನಕ್ಷತ್ರವಾಗಿದೆ. ಬಿಜೆಪಿ ಸರ್ಕಾರದ ಈ ಮಲತಾಯಿ ಧೋರಣೆ ಈ ಭಾಗದ ಜನರನ್ನು ಕೆರಳಿಸುವಂತೆ ಮಾಡಿದೆ.