ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರಾಂತ್ಯಕ್ಕೆ ಅದರದೇ ಆದ ಇತಿಹಾಸ ಇದೆ. ವೀರೇಂದ್ರ ಪಾಟೀಲ್ ಮತ್ತು ಧರಂಸಿಂಗ್ ಇಬ್ಬರು ಮುಖ್ಯಮಂತ್ರಿಗಳನ್ನು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಂತ ರಾಜಕೀಯ ಮುತ್ಸದ್ದಿಗಳನ್ನು ರಾಜ್ಯ ಹಾಗೂ ದೇಶಕ್ಕೆ ನೀಡಿದ ಖ್ಯಾತಿ ಈ ಭಾಗದ್ದಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ, ಅವರಿಗೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದು ಹಾಗೂ ಪ್ರತಿಷ್ಠಿತ ಅಖಾಡವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈ ತನ್ನ ಪ್ರಾಬಲ್ಯ ಸಾಬೀತು ಮಾಡಬೇಕಾದ ಅನಿವಾರ್ಯತೆ ಕೂಡಾ ಇದೆ.
ಕಲ್ಯಾಣ ಕರ್ನಾಟಕದಲ್ಲಿ ಕೈ-ಕಮಲ ಸಮಬಲ: ಇಂದಿನ ಕಲ್ಯಾಣ ಕರ್ನಾಟಕ (ಅಂದಿನ ಹೈದರಾಬಾದ್ ಕರ್ನಾಟಕ ಪ್ರಾಂತ್ಯ)ಕ್ಕೆ ಸ್ವತಂತ್ರ್ಯ ಸಿಕ್ಕಿದ್ದು ಒಂದು ವರ್ಷ ತಡವಾಗಿ. ದೇಶಕ್ಕೆ ಸ್ವತಂತ್ರ್ಯ ಸಿಕ್ಕು ಎಲ್ಲಡೆ ಸಂಭ್ರಮ ಆಚರಣೆ ಮಾಡುತ್ತಿದ್ದಾಗ ಹೈದರಾಬಾದ್ ಕರ್ನಾಟಕ ನಿಜಾಮನ ಆಡಳಿತದಿಂದ ಹೊರ ಬರಲು ಇಲ್ಲಿನ ಜನ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕಾಯಿತು. ಈ ಪ್ರಾಂತ್ಯ ನಿಜಾಮನ ಮುಷ್ಠಿಯಿಂದ ಹೊರ ಬಂದು ಭಾರತದ ಒಕ್ಕೂಟಕ್ಕೆ ಸೇರಲು ಒಂದು ವರ್ಷ ತಡವಾಯ್ತು.
ನಂತರ ಭಾಷಾವಾರು ಪ್ರಾಂತ್ಯ ರಚನೆಯಲ್ಲಿ ಕರ್ನಾಟಕ ಸೇರಿತು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಈ ಹಿಂದೆ ಹೈದರಾಬಾದ್ ಕರ್ನಾಟಕ ಅಂದರೆ ಕಾಂಗ್ರೆಸ್ ಪಕ್ಷದ ಮತ ಬುಟ್ಟಿ, ಕೈ ಪ್ರಾಬಲ್ಯದ ಪ್ರದೇಶ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಭದ್ರಕೋಟೆ ಇದೀಗ ಕೈ-ಕಮಲ ಎರಡು ರಾಷ್ಟ್ರೀಯ ಪಕ್ಷಗಳ ಸಮಬಲದ ಪ್ರಾಂತ್ಯವಾಗಿ ಬದಲಾಗಿದೆ.
ತವರಿನಲ್ಲಿ ಖರ್ಗೆಗೆ ಬಿಗ್ ಚಾಲೇಂಜ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯವರು. ಹೀಗಾಗಿ ಸಹಜವಾಗಿಯೇ ಕಲ್ಯಾಣ ಕರ್ನಾಟಕ ಪ್ರಾಂತ್ಯದ 7 ಜಿಲ್ಲೆಗಳಲ್ಲಿ ಅವರ ಪ್ರಭಾವ ಹೆಚ್ಚಿದೆ. ತವರಿನಲ್ಲಿ ಕೈ ಪಕ್ಷದ ಬಲವನ್ನು ಸಾಬೀತು ಮಾಡಲೇಬೇಕಾದ ಅನಿವಾರ್ಯತೆ ಅವರಿಗಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರಾಂತ್ಯಕ್ಕೆ ಅರ್ಟಿಕಲ್ 371 ಜೆ ಜಾರಿಗೆ ತರುವಲ್ಲಿ ಖರ್ಗೆ ಪಾತ್ರ ಕೂಡಾ ಬಹಳ ಮಹತ್ತರವಾದದ್ದು. ವಿಶೇಷ ಸ್ಥಾನಮಾನ ಪ್ರಾತಿನಿಧ್ಯ ಸಿಕ್ಕಿದ್ದರೂ ಕೂಡಾ ಪ್ರಾಂತ್ಯ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಇದಕ್ಕೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಖರ್ಗೆ ಅವರ ವರ್ಚಸ್ಸು ಬಳಸಿಕೊಂಡು ಹೆಚ್ಚಿನ ಪ್ರಾಬಲ್ಯ ಸಾಧಿಸಲು ಪ್ಲ್ಯಾನ್ ರೂಪಿಸಿದೆ. ಮಲ್ಲಿಕಾರ್ಜುನ ಖರ್ಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಇಲ್ಲಿನ ಕ್ಷೇತ್ರಗಳ ಸ್ಥಿತಿಗತಿ, ಜನರ ಮನಸ್ಥಿತಿ ಅರಿತಿರುವ ಅವರು, ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ. ಅಳೆದು ತೂಗಿ ಮೊದಲ ಸಾಲಿನ ಹುರಿಯಾಳುಗಳನ್ನು ಅಖಾಡಕ್ಕೆ ಇಳಿಸಿದ್ದಾರೆ.
ಬಿಜೆಪಿಗೆ ಮತ್ತೊಂದು ಸವಾಲು: ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಿ ಸೋಲಿಸುವಲ್ಲಿ ಯಶಸ್ವಿಯಾದ ಬಿಜೆಪಿ ಟೀಮ್ಗೆ ಈ ಬಾರಿ ಈ ಭಾಗದಲ್ಲಿ ಹೆಚ್ಚಿನ ಸ್ಥಾನದಲ್ಲಿ ಕಮಲ ಅರಳಿಸಲು ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಖರ್ಗೆಯನ್ನು ತವರಿನಲ್ಲಿಯೇ ಕಟ್ಟಿಹಾಕಲು ಮೋದಿ ಅಂಡ್ ಟೀಮ್ ನೀಲಿ ನಕ್ಷೆ ಸಿದ್ದಪಡಿಸಿದೆ. ಅದಕ್ಕಾಗಿಯೇ ಹಳೆಬರಿಗೆ ಕೈಕೊಟ್ಟು ಹಲವು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಈ ನಡುವೆ ಜೆಡಿಎಸ್ ಇಲ್ಲಿ ತನ್ನ ನೆಲೆ ಸ್ಥಿರಗೊಳಿಸಲು ಸಿದ್ದತೆ ಮಾಡಿಕೊಂಡಿದೆ. ಚುನಾವಣೆ ಹೊಸ್ತಿಲಲ್ಲಿ ಹೊಸ ಪಕ್ಷ ಕಟ್ಟಿ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 3 ಪಕ್ಷಗಳಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಾಂತ್ಯದ ಮೇಲೆ ರೆಡ್ಡಿ ತಮ್ಮ ದೃಷ್ಠಿಕೋನ ಕೇಂದ್ರಿಕೃತಗೊಳಿಸಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಕೂಡ ಇದೆ.
ಕ್ಷೇತ್ರದಲ್ಲಿ ಪಕ್ಷಗಳ ಬಲಾಬಲ: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಟ್ಟು 41 ವಿಧಾನ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 19, ಬಿಜೆಪಿ 18 ಹಾಗೂ ಜೆಡಿಎಸ್ 4 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾವಾರು ನೋಡುವುದಾದರೆ, ಬೀದರ್ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಬಿಜೆಪಿ 2 ಹಾಗೂ ಜೆಡಿಎಸ್ 1 ಸ್ಥಾನ ಗೆದ್ದಿದೆ. ಕಲಬುರಗಿ ಜಿಲ್ಲೆಯ 9 ಮತಕ್ಷೇತ್ರಗಳಲ್ಲಿ 4 ಕಾಂಗ್ರೆಸ್, 5 ಬಿಜೆಪಿ ಗೆದ್ದುಕೊಂಡಿವೆ. ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ 1, ಬಿಜೆಪಿ 2, ಜೆಡಿಎಸ್ 1 ಸ್ಥಾನ ಪಡೆದಿದೆ. ರಾಯಚೂರು ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಬಿಜೆಪಿ 2, ಜೆಡಿಎಸ್ 2 ಸ್ಥಾನ ಗೆದ್ದಿದೆ. ಕೊಪ್ಪಳ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2 ಹಾಗೂ ಬಿಜೆಪಿ 3 ಸ್ಥಾನ ತೆಗೆದುಕೊಂಡಿದೆ. ಬಳ್ಳಾರಿಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 3 ಹಾಗೂ ಬಿಜೆಪಿ 2 ಸ್ಥಾನ ಗೆದ್ದರೆ, ವಿಜಯನಗರದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ 2, ಬಿಜೆಪಿ 3 ಸ್ಥಾನದಲ್ಲಿ ಗೆದ್ದಿದೆ.
ಬಂಡಾಯದ ಬಿರುಗಾಳಿ ತೆನೆ ಪಕ್ಷಕ್ಕೆ ಲಾಭ: ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಆಯಾ ಕ್ಷೇತ್ರಗಳ ಮೇಲೆ ನಿರಂತರ ಹಿಡಿತ ಕಾಯ್ದುಕೊಂಡಿದ್ದಾರೆ. ಪಕ್ಷ ಸಿದ್ದಾಂತ ಆಧಾರಿತ ಅಲ್ಲದೇ ಕೆಲವಡೆ ವ್ಯಕ್ತಿ ಆಧಾರಿತ ಗೆಲವು ಕೂಡಾ ಇದೆ. ಜೆಡಿಎಸ್ ಇಲ್ಲಿ ಅಷ್ಟೊಂದು ಬಲಿಷ್ಠ ಶಕ್ತಿ ಹೊಂದಿಲ್ಲ. ಆದರೆ, ತವರಿನಲ್ಲಿ ಖರ್ಗೆ ಅವರನ್ನು ಕಟ್ಟಿಹಾಕುವ ತವಕದಲ್ಲಿ ಬಿಜೆಪಿ ನಾಯಕರು ಕೆಲ ಪ್ರಮುಖರಿಗೆ ಕೋಕ್ ಕೊಟ್ಟು ಹೊಸಬರಿಗೆ ಮಣೆ ಹಾಕಿದ್ದಾರೆ. ಇದರಿಂದ ಇಲ್ಲಿನ ರಾಜಕೀಯ ಚಿತ್ರಣ ಕೊಂಚ ಮಟ್ಟಿಗೆ ಬದಲಾಗಿದೆ. ಟಿಕೆಟ್ ವಂಚಿತರಾದ ಪ್ರಬಲ ಆಕಾಂಕ್ಷಿಗಳು ಜೆಡಿಎಸ್ ಗರಡಿ ಸೇರಿದ್ದು, ಈ ಭಾಗದಲ್ಲಿ ಜೆಡಿಎಸ್‌ಗೆ ಗಟ್ಟಿಗೊಳಿಸಲು ಸುವರ್ಣ ಅವಕಾಶ ಸಿಕ್ಕಂತಾಗಿದೆ. ಕಲ್ಯಾಣ ಕರ್ನಾಟಕದ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಪಂಚರತ್ನ ಯಾತ್ರೆ ಮೂಲಕ ಸಂಚಾರ ನಡೆಸಿ ಒಮ್ಮೆಯಾದರೂ ಬಹುಮತ ಕೊಟ್ಟು ನೋಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತೆನೆ ಗರಡಿ ಸೇರಿದ ಪ್ರಮುಖರು: ಜೇವರ್ಗಿ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿ ಬಿಜೆಪಿ ತೊರೆದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಯಾದಗಿರಿಯಿಂದ ಡಾ. ಎ.ಬಿ.ಮಾಲಕರೆಡ್ಡಿ, ಶಹಾಪುರದಿಂದ ಗುರು ಪಾಟೀಲ್ ಶಿರವಾಳ, ಬೀದರದಿಂದ ಸೂರ್ಯಕಾಂತ ನಾಗಮಾರಪಳ್ಳಿ, ಕೊಪ್ಪಳದಿಂದ ಸಿ.ವಿ.ಚಂದ್ರಶೇಖರ್, ಗಂಗಾವತಿಯಿಂದ ಹೆಚ್.ಆರ್.ಚನ್ನಕೇಶವ ತೆನೆ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಇವರು ಬಿಜೆಪಿಗೆ ಬಿರುಸಿನ ಪೈಪೋಟಿ ಕೊಡುವ ಲಕ್ಷಣಗಳು ಕಂಡು ಬರುತ್ತಿದೆ.
ಮೋದಿ ಕಟ್ಟಿ ಹಾಕಲು ಪ್ರತಿ ಪಕ್ಷಗಳ ಪ್ರತಿತಂತ್ರ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲೆ, ಜನವರಿ ತಿಂಗಳಿನಿಂದಲೇ ಮೋದಿ ಮೇನಿಯಾ ಶುರುವಾಗಿದೆ. ಕಳೆದ ಜನವರಿ ತಿಂಗಳಲ್ಲಿ ಖುದ್ದು ಪ್ರಧಾನಿ ಮೋದಿ ಸೇಡಂ ತಾಲೂಕಿನ ಮಳಖೇಡ್ ಗ್ರಾಮಕ್ಕೆ ಆಗಮಿಸಿ 51 ಸಾವಿರಕ್ಕೂ ಹೆಚ್ಚು ಬಂಜಾರ್ ಸಮುದಾಯದ ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಅಂದೇ ಯಾದಗಿರಿ, ಕಲಬುರಗಿಯಲ್ಲಿ ಸುಮಾರು 10,800 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೀಡಿದ್ದಾರೆ. ಇನ್ನೊಂದಡೆ ರಾಜ್ಯ ಬಿಜೆಪಿ ನಾಯಕರು ಮೀಸಲಾತಿ ಹೆಚ್ಚಳ, ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮಕ್ಕೆ 5 ಸಾವಿರ ಕೋಟಿ ರೂ. ಹಣ ನೀಡಿದ್ದೇವೆ ಎಂದು ಮತ ಕೇಳಲು ಆರಂಭಿಸಿದ್ದಾರೆ. ಬಿಜೆಪಿಯವರು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದೇ ಬಂತು, ಅಭಿವೃದ್ಧಿ ಮಾತ್ರ ಆಗಿಲ್ಲ, 371ಜೆ ಅಡಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 40 ಸಾವಿರ ಹುದ್ದೆಗಳು ಭರ್ತಿ ಮಾಡಿಲ್ಲ, ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿಲ್ಲ ಅನ್ನೋದು ಸೇರಿದಂತೆ ಇತ್ಯಾದಿ ಸೌಕರ್ಯಗಳ ಕೊರತೆ ಮತ್ತು ಪಿಎಸ್ಐ, ಜೆಇ ನೇಮಕಾತಿ ಪರೀಕ್ಷೆ ಹಗರಣ, ಶೇ 40ರಷ್ಟು ಸರ್ಕಾರ ಹೀಗೆ ಹತ್ತು ಹಲವು ವಿಚಾರವಾಗಿ ಬಿಜೆಪಿಯನ್ನು ಪ್ರತಿಪಕ್ಷಗಳು ಕುಟುಕುತ್ತಿವೆ.
ಗೆಲ್ಲುವ ತವಕದಲ್ಲಿ ಪಕ್ಷಗಳು: ಕಲ್ಯಾಣ ಕರ್ನಾಟಕ ಪ್ರಾಂತ್ಯ ಅಹಿಂದ ವೋಟ್ ಬ್ಯಾಂಕ್ ಹೊಂದಿರುವ ಕ್ಷೇತ್ರವಾಗಿದೆ. ಹಿಂದುಳಿದ ವರ್ಗಗಳ ಮತ ಹಾಗೂ ಲಿಂಗಾಯತರು ಕ್ಷೇತ್ರದ ನಿರ್ಣಾಯಕರಾಗಿದ್ದಾರೆ. ಮತದಾರರ ಓಲೈಕೆ ಮಾಡಿ ಕ್ಷೇತ್ರ ಮಡಲಿಗೆ ಹಾಕಿಕೊಳ್ಳಲು ಶತಪ್ರಯತ್ನ ಕಂಡುಬರುತ್ತಿದೆ. ಒಟ್ಟಿನಲ್ಲಿ ಕೈ ಭದ್ರಕೋಟೆಗೆ ಲಗ್ಗೆ ಇಟ್ಟು 2008ರ ನಂತರದಲ್ಲಿ ನೆಲೆ ಕಂಡುಕೊಳ್ಳುತ್ತ ಸಮಬಲದ ಪೈಪೋಟಿ ನೀಡುತ್ತಿರುವ ಭಾರತೀಯ ಜನತಾ ಪಕ್ಷ, 2023ರ ಚುನಾವಣೆಯಲ್ಲಿ ಹೆಚ್ಚನ ಸ್ಥಾನ ಗಳಿಕೆ ಮಾಡಲು ಯೋಜನೆ ರೂಪಿಸಿದರೆ, ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಮಡಲಿಗೆ ಹಾಕಿಕೊಂಡು ಭದ್ರಕೋಟೆ ಭದ್ರಗೊಳಿಸಲು ಕೈ ಯೋಜನೆ ರೂಪಿಸಿದೆ.
ಕಳೆದ ಬಾರಿ ನಾಲ್ಕು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಜೆಡಿಎಸ್ ಈ ಬಾರಿ ಇಬ್ಬರು ನಡುವೆ, ಬಂಡಾಯದ ಬಿಸಿಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಮುಂದಾಗಿದೆ. ಬಿಜೆಪಿ ಕಡೆಗಣಿಸಿದೆ ಎಂದು ಹೊಸ ಪಕ್ಷ ಹುಟ್ಟುಹಾಕಿದ ಜನಾರ್ಧನ ರೆಡ್ಡಿ ಕನಿಷ್ಠ 7-8 ಕ್ಷೇತ್ರ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಬಂಡಾಯ ಎದ್ದು ಇನ್ನೂ ಕೆಲ ಬಲಿಷ್ಠ ಅಭ್ಯರ್ಥಿಗಳು ಪಕ್ಷೇತರವಾಗಿಯೂ ಕಣಕ್ಕೆ ಇಳಿಯುತ್ತಿದ್ದಾರೆ. ಅದರಂತೆ ಆಮ್ ಆದ್ಮಿ, ಕೆಆರ್‌ಎಸ್, ಜೆಡಿಯು ಹೀಗೆ.. ನಾನಾ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಮೇ. 13 ರಂದು ಗೊತ್ತಾಗಲಿದೆ.
371ಜೆ ಸಮರ್ಪಕ ಜಾರಿ ಆಗಿಲ್ಲ: ದಿವಂಗತ ವೈಜನಾಥ ಪಾಟೀಲ್, ಎನ್ ಧರ್ಮಸಿಂಗ್, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಈ ಭಾಗದ ಅಸಮಾನತೆ ಹೋಗಲಾಡಿಸಲು ಆರ್ಟಿಕಲ್ 371ಜೆ ಜಾರಿಗೆ ತರಲಾಗಿದೆ. ನಂತರದ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು, ಸದ್ಯ ಆಢಳಿತದಲ್ಲಿರುವ ಬಿಜೆಪಿ ಸರ್ಕಾರ 5 ಸಾವಿರ ಕೋಟಿ ಅನುದಾನ ಮೀಸಲಿಟ್ಟು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಗ್ರ ಅಭಿವೃದ್ಧಿಗೆ ಪ್ರಯತ್ನ ಪಡುತ್ತಿದೆ. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ 371ಜೆ ಸಮರ್ಪಕ ಜಾರಿ ಆಗಿಲ್ಲ. ಅಭಿವೃದ್ಧಿ ಮಂಡಳಿಯಲ್ಲಿ ಅಗತ್ಯ ಸಿಬ್ಬಂದಿ ಸಹ ಇಲ್ಲದೆ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.
ಮುಂಚೆ ರಾಜ್ಯದ ಸಚಿವರೊಬ್ಬರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಂಪ್ರದಾಯವಿತ್ತು. ಈಗಿನ ಬಿಜೆಪಿ ಸರ್ಕಾರ ಈ ಭಾಗದ ಶಾಸಕರನ್ನ ಅಧ್ಯಕ್ಷರಾಗಿ ನೇಮಕ ಮಾಡಿದೆ. ಆದರೆ, ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳು ತುಂಬುವ ಕೆಲಸ ಆಗಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ 371ಜೆ ಜಾರಿಗೆ ತಂದಿರುವ ಗರಿಮೆ ಇದ್ರೆ, ಬಿಜೆಪಿ ಸರ್ಕಾರಕ್ಕೆ ಹೆಚ್ಚಿನ ಅನುದಾನ ಕೊಟ್ಟಿರುವ ಗರಿಮೆ ಇದೆ. ಈಗ ಖರ್ಗೆ ಎಐಸಿಸಿ ಅಧ್ಯಕ್ಷ ಉನ್ನತ ಸ್ಥಾನ ಅಲಂಕರಿಸಿದ್ದು ಅವರ ಪ್ರಭಾವ ಹೆಚ್ಚಿಸಿದೆ. ಹೀಗಾಗಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲಬಹುದು, ಬಿಜೆಪಿ ನಾಯಕರಿಗೂ ಇದು ಗೊತ್ತಿದೆ. ಅದಕ್ಕಾಗಿಯೇ ಹೊಸ ಅಭ್ಯರ್ಥಿಗಳನ್ನು ಕ್ಷೇತ್ರಕ್ಕೆ ಇಳಿಸಿ ಕಾಂಗ್ರೆಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಪ್ರಯತ್ನ ನಡೆಸಿದ್ದಾರೆ. ಮತ್ತೊಮ್ಮೆ ಕ್ಷೇತ್ರದಲ್ಲಿ ಎರಡು ಪಕ್ಷಗಳು ಸಮಬಲ ಗೆಲವು ಸಾಧಿಸುವ ಲಕ್ಷಣಗಳು ಕಂಡುಬರುತ್ತಿದೆ ಎನ್ನುತ್ತಾರೆ ಹಿರಿಯ ಜನಪರ ಹೋರಾಟಗಾರ ಲಕ್ಷ್ಮಣ ದಸ್ತಿ.
ಕಲ್ಯಾಣ ಕರ್ನಾಟಕದ ಮತದಾರರ ವಿವರ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆ ಒಳಗೊಂಡು ಒಟ್ಟು ಮತದಾರರು 9,424,958 ಇದ್ದಾರೆ. ಈ ಫೈಕಿ ಪುರುಷ ಮತದಾರರು 4,726,473, ಮಹಿಳಾ ಮತದಾರರು, 4,697,707, ಇತರೆ ಮತದಾರರು 778 ಇದ್ದಾರೆ.
ಜಿಲ್ಲಾವಾರು ಮತಗಳು: ಬೀದರ್ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 6,96,687, ಮಹಿಳೆಯರು 6,51,289 ಇತರೆ 43, ಒಟ್ಟು ಮತಗಳು 13,48,019, ಕಲಬುರಗಿ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 10,98,549, ಮಹಿಳೆಯರು 10,72,662, ಒಟ್ಟು ಮತಗಳು 21,71,211, ಯಾದಗಿರಿ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 4,81,459, ಮಹಿಳೆಯರು 4,80,338, ಇತರೆ 97, ಒಟ್ಟು ಮತಗಳು 9,61,894, ರಾಯಚೂರ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 7,90,204, ಮಹಿಳೆಯರು 8,14,773, ಇತರೆ 281, ಒಟ್ಟು ಮತಗಳು 16,05,258, ಕೊಪ್ಪಳ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 5,62,376, ಮಹಿಳೆಯರು 5,66,341, ಇತರೆ 47, ಒಟ್ಟು ಮತಗಳು 11,28,764, ಬಳ್ಳಾರಿ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 5,61,718, ಮಹಿಳೆಯರು 5,79,012, ಇತರೆ 169, ಒಟ್ಟು ಮತಗಳು 11,40,899, ವಿಜಯನಗರ ಜಿಲ್ಲೆಯ ಮತದಾರರ ಮಾಹಿತಿ: ಪುರುಷರು 5,35,480, ಮಹಿಳೆಯರು 5,33,292, ಇತರೆ 141, ಒಟ್ಟು ಮತಗಳು 10,68,913 ಇದ್ದಾರೆ.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ನಾನೇ ಆ್ಯಕ್ಟರ್, ಡೈರೆಕ್ಟರ್, ನನ್ನದೇ ಸಂಕಲನ: ಬಸನಗೌಡ ಪಾಟೀಲ್ ಯತ್ನಾಳ್