ಕಲಬುರಗಿ: ಕಾಂಗ್ರೆಸ್ ಅಧೀನದಲ್ಲಿರುವ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಕೊರೊನಾಗೆ ತುತ್ತಾಗಿ ತಿಮ್ಮಯ್ಯ ಪವಾರ್ ಅವರು ನಿಧನದಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಜನವರಿ 24ರಂದು ಚುನಾವಣೆ ನಿಗದಿಯಾಗಿದೆ. ತಿಮ್ಮಯ್ಯ ಪವರ್ ಅವರು ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಉಪಾಧ್ಯಕ್ಷರ ಅಧಿಕಾರಾವಧಿ ಕೇವಲ ನಾಲ್ಕು ತಿಂಗಳಿದ್ದು, ಅವಧಿ ಕಡಿಮೆ ಇರುವ ಕಾರಣ ಯಾರು ಸಹ ಮುಂದೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದರ ಜೊತೆಗೆ ಶಾಸಕ ಪ್ರಿಯಾಂಕ್ ಖರ್ಗೆಯವರು ಯಾರಿಗೆ ಬೆಟ್ಟು ಮಾಡುತ್ತಾರೋ ಅವರೇ ಉಪಾಧ್ಯಕ್ಷರಾಗಲು ಸಿದ್ಧರಿರಬೇಕು ಎಂಬ ಅಭಿಪ್ರಾಯ ಕಾಂಗ್ರೆಸ್ ಸ್ಥಳೀಯ ನಾಯಕರು ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಿದ್ದು, ಕಳೆದ ಬಾರಿ ಪ್ರಬಲ ಆಕ್ಷಾಂಕಿಗಳಾಗಿದ್ದ ದೇವೇಂದ್ರ ಕರದಳ್ಳಿ, ಗಂಗಾ ತುಕಾರಾಮ್, ಗುಜ್ಜಾಬಾಯಿ ಸಿಂಗೆ, ಶರಣಬಸು ನಾಟೇಕಾರ್, ಮರಗಪ್ಪ ಕಲಕುಟಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿಶಾಲ ನಂದೂರಕರ್ ಈ ಬಾರಿ ಉಪಾಧ್ಯಕ್ಷ ಸ್ಥಾನವನ್ನು ಅಲ್ಲಗಳೆಯುತ್ತಿದ್ದಾರೆ. ಇತ್ತ ಬಿಜೆಪಿಯವರು ಅಖಾಡಕ್ಕೆ ಇಳಿಯದೆ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದರಿಂದ ತೆರವಾದ ಸ್ಥಾನ ತುಂಬುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆ ಮೇಲೆ ಶೂಟೌಟ್, ಕೊಲೆ: ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಅರೆಸ್ಟ್