ಕಲಬುರಗಿ: ಖಾಸಗಿ ವಾಹನಗಳ ದಟ್ಟಣೆ ನಿಯಂತ್ರಣಗೊಳಿಸುವ ಉದ್ದೇಶದಿಂದ ಬೆಂಗಳೂರು, ಹುಬ್ಬಳ್ಳಿ - ಧಾರವಾಡಗಳ ಮಾದರಿಯಲ್ಲಿ ಕಲಬುರಗಿಯಲ್ಲಿಯೂ ಸಹ ಪ್ರತ್ಯೇಕ ಟ್ರ್ಯಾಕ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ.
ಸರ್ಕಾರಿ ಸಾರಿಗೆ ಮತ್ತು ಖಾಸಗಿ ವಾಹನಗಳಿಗಾಗಿ ಪ್ರತ್ಯೇಕ ಟ್ರ್ಯಾಕ್ ಸ್ಥಾಪನೆಗೆ ಇಂದು ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಪೊಲೀಸ್, ಸಾರಿಗೆ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾ ಆಸ್ಪತ್ರೆಯಿಂದ ಆರ್.ಟಿ.ಒ. ಕ್ರಾಸ್ವರೆಗೂ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಎನ್.ಇ.ಕೆ.ಆರ್.ಟಿ.ಸಿ. ಎಂಡಿ ಕೂರ್ಮಾರಾವ್ ಹಾಗೂ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಖುದ್ದು ಉಪಸ್ಥಿತಿ ಇದ್ದು ಪರಿಶೀಲನೆ ನಡೆಸಿದರು.
ಸರ್ಕಾರಿ ವಾಹನ, ಸಾರಿಗೆ ವಾಹನ ಮತ್ತು ಆ್ಯಂಬುಲೆನ್ಸ್ಗಳಿಗೆ ಒಂದು ಟ್ರ್ಯಾಕ್ ಹಾಗೂ ಅದರ ಪಕ್ಕದಲ್ಲಿಯೇ ಸೈಕಲ್ ಸಂಚಾರಕ್ಕೆ ಪ್ರತ್ಯೇಕ ಟ್ರ್ಯಾಕ್ ಸ್ಥಾಪನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಖಾಸಗಿ ವಾಹನಗಳ ಸಂಚಾರಕ್ಕೆಂದು ಪ್ರತ್ಯೇಕ ಟ್ರ್ಯಾಕ್ ನಿರ್ಮಿಸುವ ಚಿಂತನೆ ನಡೆಸಲಾಗುತ್ತಿದೆ.
ಸಾರಿಗೆ ಬಸ್ಗಳ ಸಂಚಾರ ಮಹತ್ವ ಪ್ರತ್ಯೇಕ ಟ್ರ್ಯಾಕ್ ಸ್ಥಾಪನೆ ಬಳಿಕ ಗೊತ್ತಾಗಲಿದೆ. ಇದರಿಂದ ಆದಷ್ಟು ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸುವಂತೆ ಜನತೆಗೆ ಉತ್ತೇಜನ ನೀಡಲಾಗುತ್ತೆ. ಜೊತೆಗೆ ಆ್ಯಂಬುಲೆನ್ಸ್ಗೂ ಸಹ ಸುಲಭವಾಗಿ ಹೋಗಲು ಅವಕಾಶ ಕಲ್ಪಿಸುತ್ತದೆ. ಸದ್ಯಕ್ಕೆ ಹೀರಾಪುರ ಕ್ರಾಸ್ನಿಂದ ವಿಶ್ವವಿದ್ಯಾಲಯದವರೆಗೂ ಟ್ರ್ಯಾಕ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಈ ಕುರಿತು ಸಾರ್ವಜನಿಕರ ಜೊತೆ ಚರ್ಚಿಸಿದ ನಂತರ ಟೆಂಡರ್ ಕರೆಯಲಾಗುವುದು. ಏನಾದರು ಲೋಪದೋಷ ಕಂಡು ಬರುವ ಬಗ್ಗೆಯೂ ಪರಿಶೀಲನೆ ನಡೆಸಿ ಅವಶ್ಯಕತೆ ಇದ್ದರೆ ಬದಲಾವಣೆಗೆ ತರುವ ಪ್ರಯತ್ನ ಪಡುವುದಾಗಿ ಎನ್.ಇ.ಕೆ.ಆರ್.ಟಿ.ಸಿ. ಎಂಡಿ ಕೂರ್ಮಾರಾವ್ ತಿಳಿಸಿದ್ದಾರೆ.