ಕಲಬುರಗಿ: ಅಫಜಲಪುರ ತಾಲೂಕಿನ ಹಾವನೂರ ಗ್ರಾಮದಿಂದ ಡಿಸೆಂಬರ್ 5ರಂದು ಕಾಣೆಯಾಗಿದ್ದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಗ್ರಾಮದ ಹೊರವಲಯದ ಹಳ್ಳದ ಪಕ್ಕದ ಜಮಾದಾರ ಎನ್ನುವವರ ಹೊಲದಲ್ಲಿ ಬಾಲಕಿ 5 ವರ್ಷದ ಶ್ವೇತಾ ಶವ ಪತ್ತೆಯಾಗಿದೆ. ಬಾಲಕಿ ಕಾಣೆಯಾದ ಬಗ್ಗೆ ದೇವಲಗಾಣಗಾಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕಾಣೆಯಾದ 8 ದಿನಗಳ ಬಳಿಕ ಇವತ್ತು ಬಾಲಕಿ ಶ್ವೇತಾಳ ಅಸ್ಥಿಪಂಜರ, ಧರಿಸಿದ ಬಟ್ಟೆಗಳು ಪತ್ತೆಯಾಗಿವೆ.
ಗ್ರಾಮದಲ್ಲಿ ಅನ್ಯ ಕೋಮಿನವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವೇ ಮಗಳ ಕೊಲೆಗೆ ಕಾರಣ ಅಂತ ಮೃತಳ ತಂದೆ ನಿಂಗಪ್ಪ ಪೂಜಾರಿ ಆರೋಪಿಸಿದ್ದಾರೆ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಸಂಬಂಧಿಕರು ಆಗ್ರಹಿಸಿದ್ದು, ಸ್ಥಳದಲ್ಲಿ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ದೇವಲ ಗಾಣಗಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.