ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ರುದ್ರನರ್ತನ ಮುಂದುವರೆದಿದ್ದು, ಮಂಗಳವಾರ ಒಂದೇ ದಿನ 100 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.
ಈ ಪೈಕಿ 19 ಮಕ್ಕಳು, 32 ಮಹಿಳೆಯರು, 49 ಪುರುಷರಿಗೆ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 405ಕ್ಕೆ ಏರಿಕೆಯಾಗಿದ್ದು, ಕೊರೊನಾ ಬಾಧಿತ ಜಿಲ್ಲೆಗಳ ಪೈಕಿ ಕಲಬುರಗಿ ಇದೀಗ ಎರಡನೆ ಸ್ಥಾನಕ್ಕೇರಿದೆ.
ಇಂದು ಸೋಂಕು ದೃಢಪಟ್ಟ ಬಹುತೇಕರು ತಾಂಡಾ ನಿವಾಸಿಗಳಾಗಿದ್ದಾರೆ. ಚಿತ್ತಾಪುರ ತಾಲೂಕಿನ ವಿವಿಧ ತಾಂಡದ 57 ಜನ, ಅಫಜಲಪುರದ 3, ಸೇಡಂನ 25, ಕಲಬುರಗಿಯ 5, ಚಿಂಚೋಳಿಯ 9 ಮತ್ತು ಜೇವರ್ಗಿಯ ಓರ್ವರಿಗೆ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದಿಂದ ವಾಪಾಸ್ಸಾದ ಇವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿತ್ತು. ಇದುವರೆಗೆ ಜಿಲ್ಲೆಯಲ್ಲಿ 7 ಜನ ಮೃತಪಟ್ಟಿದ್ದು, 128 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 270 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 4,784 ಜನರ ಸ್ಯಾಂಪಲ್ಸ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.