ಕಲಬುರಗಿ: ನಮ್ಮ ವ್ಯವಹಾರವೇ ಬಿದ್ದೋಯ್ತು. ನಾವು ಬೀದಿಗೆ ಬಂದೆವು ಎಂದು ಹಲವರು ಅಳಲು ತೋಡಿಕೊಂಡಿರುವುದನ್ನು ಕಂಡಿದ್ದೇವೆ. ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಇಂಥವರಿಗೆ ಮಾದರಿಯಾಗಿ ನಿಂತಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು, ಇತ್ತೀಚಿನ ದಿನಗಳಲ್ಲಿ ಕೃಷಿ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಇಂತಹ ಕಾಲದಲ್ಲಿ ಎರಡು ಕಾಲುಗಳಿಲ್ಲದಿದ್ದರೂ ಕಲಬುರಗಿ ವಿಶೇಷಚೇತನ ವ್ಯಕ್ತಿಯೋರ್ವ ಕೃಷಿ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಇವರ ಹೆಸರು ಶಿವಪ್ಪ ಹಣಮಂತ ಜಮಾದಾರ. ಕಲಬುರಗಿ ತಾಲೂಕಿನ ಜಂಬಗಾ(ಬಿ) ಗ್ರಾಮದ ಇವರು ಹುಟ್ಟಿದ 6 ವರ್ಷಕ್ಕೆ ಪೋಲಿಯೋನಿಂದಾಗಿ ತನ್ನೆರಡು ಕಾಲುಗಳ ಸತ್ವ ಕಳೆದುಕೊಂಡರು. ಅಂಗ ವೈಫಲ್ಯವಿದ್ದರೂ 30 ವರ್ಷಕ್ಕೆ ಮದುವೆಯಾಗಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಜೀವನ ಸಾಗಿಸುತ್ತಿದ್ದರು. ಆದರೆ ಅಂಗಡಿ ಸರಿಯಾಗಿ ನಡೆಯದ ಕಾರಣ ತಮ್ಮ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು.
'ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಪತ್ನಿಯ ಸಹಾಯದೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದೆ. ಪಾಲಕ್, ಪುದೀನಾ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದೇನೆ. ತರಕಾರಿಯನ್ನು ಸ್ವತಃ ನಾನೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಆದಾಯದಿಂದ ಕುಟುಂಬ ಸಾಗಿಸುತ್ತಿದ್ದಾನೆ' ಎನ್ನುತ್ತಾರೆ ರೈತ ಶಿವಪ್ಪ ಹಣಮಂತ ಜಮಾದಾರ.
ಎರಡು ಕಾಲುಗಳು ಇಲ್ಲದಿದ್ದರೂ ಕೂಡ ಸ್ವತಃ ತಾನೇ ಒಂದು ಎಕರೆ ಜಮೀನಿನಲ್ಲಿ ತರಕಾರಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಪೈಪ್ಗಳ ಮೂಲಕ ನೀರು ಬಿಡುತ್ತಾರೆ. ಕಳೆ ಕೀಳುತ್ತಾರೆ. ಸೊಪ್ಪು ಕಟಾವಿಗೆ ಬಂದ ನಂತರ ಪತ್ನಿ ಜಗದೇವಿ ಸಹಾಯದೊಂದಿಗೆ ತನ್ನ ತ್ರಿಚಕ್ರ ವಾಹನದ ಮೇಲೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಾರೆ. ಸರ್ಕಾರ ಇವರಿಗೆ ಯಾವುದಾದರೂ ಯೋಜನೆಯಲ್ಲಿ ಕೃಷಿಗೆ ಬೇಕಾಗುವ ಸಲಕರಣೆಗಳನ್ನು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 20 ವರ್ಷದ ಶ್ರಮ! ಕೃಷಿ ಮಾಡದೆ ಪಾಳುಬಿದ್ದ 300 ಎಕರೆ ಭೂಮಿಯನ್ನು ದಟ್ಟ ಅರಣ್ಯ ಮಾಡಿದ ವ್ಯಕ್ತಿ