ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ಬಹುದಿನಗಳ ದೆಹಲಿ ವಿಮಾನ ಹಾರಾಟದ ಕನಸು ಇಂದು ನೇರವೇರಿದೆ. ಕಲಬುರಗಿ-ದೆಹಲಿ (ಹಿಂಡನ್) ವಿಮಾನ ಸೇವೆ ಇಂದಿನಿಂದ ಆರಂಭಗೊಂಡಿದ್ದು, ಸಂಸದ ಡಾ. ಉಮೇಶ್ ಜಾಧವ್ ಚಾಲನೆ ನೀಡಿದರು.
ಕಲಬುರಗಿಯ ಸರಡಗಿ ವಿಮಾನ ನಿಲ್ದಾಣದಲ್ಲಿ ಜ್ಯೋತಿ ಬೆಳಗಿಸಿ, ಕೇಕ್ ಕತ್ತರಿಸಿ, ಮೊದಲನೇ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವ ಮೂಲಕ ಚಾಲನೆ ನೀಡಿದರು. ಸ್ಟಾರ್ ಏರ್ ಸಂಸ್ಥೆ ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಸೇರಿ 3 ದಿನಗಳ ಕಾಲ ದೆಹಲಿಗೆ ವಿಮಾನ ಹಾರಾಟ ನಡೆಸಲಿದೆ.
ಸುಮಾರು 1800 ಕಿ.ಮೀ. ದೂರದಲ್ಲಿರುವ ದೆಹಲಿಗೆ ಈಗ ಎರಡು ಗಂಟೆಯಲ್ಲಿ ತಲುಪಬಹುದಾಗಿದೆ. ಕಲಬುರಗಿಯಿಂದ ಬೆಳಗ್ಗೆ 10-20ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12-40ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ 1-40ಕ್ಕೆ ಹೊರಟು 3-30ಕ್ಕೆ ಕಲಬುರಗಿಗೆ ತಲುಪಲಿದೆ. ವಿಮಾನ ಹಾರಾಟದ ಪ್ರಯೋಜನ ಪಡೆಯುವಂತೆ ಸಂಸದ ಉಮೇಶ್ ಜಾಧವ್ ಜನತೆಗೆ ತಿಳಿಸಿದರು.