ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಬಂಡವಾಳ ಮಾಡಿಕೊಂಡು ತಹಶೀಲ್ದಾರ್ ಕಚೇರಿ ಸಿಬ್ಬಂದಿ ವಸೂಲಿ ದಂಧೆಗಿಳಿರುವುದು ಬಯಲಾಗಿದೆ.
ನಗರದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಚುನಾವಣೆಗೆ ಸ್ಪರ್ಧಿಸಲು ಬರುವವರಿಗೆ ಅಗತ್ಯ ದಾಖಲಾತಿ ನೀಡಲು ಲಂಚ ಪಡೆಯುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.
ಲಂಚ ಯಾವುದಕ್ಕೆ?
ವೋಟರ್ ಲಿಸ್ಟ್ ನೀಡಲು 200 ರೂ., ಖಾತಾ ಎಕ್ಸ್ಟ್ರಾಕ್ಟ್ ಮಾಡಿಕೊಡಲು 200 ರೂ., ದಾಖಲೆಗಳಿಗೆ ಸಹಿ ಹಾಕಲು 100 ರೂ., ಜಾತಿ ಪ್ರಮಾಣ ಪತ್ರ ನೀಡಲು 400 ರೂ. ಸುಲಿಗೆ ಮಾಡಲಾಗುತ್ತಿದೆ. ಹಣ ಕೊಡದಿದ್ದರೆ ವಿಳಂಬ ಮಾಡುತ್ತಾ ಸತಾಯಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ನಾಮಿನೇಷನ್ ಫೈಲ್ ಮಾಡಲು ಕೊನೆ ದಿನಾಂಕ ಇದೇ ತಿಂಗಳು 11 ರಂದು ನಿಗದಿ ಮಾಡಲಾಗಿದೆ. ಹೀಗಾಗಿ ದಾಖಲೆ ಪಡೆಯಲು ಕೇಳಿದಷ್ಟು ಹಣವನ್ನು ಆಕಾಂಕ್ಷಿಗಳು ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ಆರೋಪಿ ಬಸವರಾಜ ಮುತ್ತಗಿ
ಈ ಬಗ್ಗೆ ತಹಶೀಲ್ದಾರ್ ಜಗನ್ನಾಥ ಪೂಜಾರಿ ಅವರನ್ನು ವಿಚಾರಿಸಿದಾಗ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದರು. ಜೊತೆಗೆ ವಿಚಾರ ತಿಳಿದು ತಕ್ಷಣ ಕ್ರಮ ಕೈಗೊಂಡು ಹಣ ವಸೂಲಿಯನ್ನು ಬಂದ್ ಮಾಡಿಸಿದ್ದಾರೆ.