ಕಲಬುರಗಿ: ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಕಲಬುರಗಿ ತಾಲೂಕಿನ ಜಂಬಗಾ(ಬಿ) ಗ್ರಾಮದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿಯ ಜಾತ್ರಾ ಮಹೋತ್ಸವವು ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು. ಮೂರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಆಕರ್ಷಕ ಗೊಂಬೆ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಕೊನೆಯ ದಿನ(ಶನಿವಾರ) ಅದ್ಧೂರಿ ಮೆರವಣಿಗೆ ಬಳಿಕ ದೇವಿ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಊರ ಸೀಮೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಮದ್ದು ಸಿಡಿಸುವ ಕಾರ್ಯಕ್ರಮ: ಜಾತ್ರೋತ್ಸವದ ನಿಮಿತ್ತ ದೇವಸ್ಥಾನ ಆವರಣವನ್ನು ಗುರುವಾರ ರಾತ್ರಿ ಊರ ಯುವಕರೆಲ್ಲ ಸೇರಿಕೊಂಡು ವಿದ್ಯುತ್ ದೀಪಗಳಿಂದ ಶೃಂಗರಿಸಿ ಕಲರ್ ಕಲರ್ ಮದ್ದುಗಳನ್ನು ಸಿಡಿಸುವ ಮೂಲಕ ಸಂಭ್ರಮಿಸಿದರು. ವಿದ್ಯುತ್ ದೀಪಗಳಿಂದ ದೇವಿಯ ಮೂರ್ತಿ ಪ್ರತಿಷ್ಠಾನೆ ಮಾಡಿರುವುದು ಗಮನ ಸೆಳೆಯಿತು.
ಆಕರ್ಷಕ ಗೊಂಬೆ ಮೆರವಣಿಗೆ: ಜಾತ್ರೆಯ ಮೊದಲ ದಿನ ಗ್ರಾಮದಲ್ಲಿ ಡೊಳ್ಳು, ತಮಟೆ ಸೇರಿ ವಿವಿಧ ವಾದ್ಯಗಳೊಂದಿಗೆ ಗೊಂಬೆಗಳ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು.
ಮೈನವಿರೇಳಿಸುವ ಕುಸ್ತಿ ಪಂದ್ಯ: ಜಾತ್ರೆ ಹಿನ್ನೆಲೆ ಮಹಾಲಕ್ಷ್ಮಿದೇವಿ ಜಾತ್ರಾ ಆವರಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯ ಮನವಿರೇಳಿಸುವಂತಿತ್ತು. ರಾಜ್ಯ ಮಾತ್ರವಲ್ಲದೇ ಪಕ್ಕದ ರಾಜ್ಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದಲೂ ಸಹ ಕುಸ್ತಿ ಪಟುಗಳು ಆಗಮಿಸಿದ್ದರು. ಕುಸ್ತಿಯಲ್ಲಿ ಪೈಲ್ವಾನರು ತೊಡೆ ತಟ್ಟಿ ಅಖಾಡ ಪ್ರವೇಶಿಸುತ್ತಿದ್ದರೆ, ನೋಡುಗರು ಕೇಕೆ, ಸಿಳ್ಳೆ ಹಾಕಿ ಕುಸ್ತಿಪಟುಗಳನ್ನು ಹುರಿದುಂಬಿಸಿದರು.
ಇದನ್ನೂ ಓದಿ: ಕಾಡಲ್ಲಿ ಪ್ರಾಣಾಪಾಯ ಉಂಟಾದರೇ ಬಚಾವ್ ಆಗುವುದು ಹೇಗೆ?: ಫಾರೆಸ್ಟ್ ಸಿಬ್ಬಂದಿಗೆ ವರ್ಕ್ ಶಾಪ್