ಕಲಬುರಗಿ: ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆ ತಂದಾಗ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆಸ್ಪತ್ರೆ ಮೇಲ್ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಕೈದಿ ಶೇಖ ಜಾವೇದ್ ಅಲಿಯಾಸ್ ಮುನ್ನಾ ಎಂದು ಗುರುತಿಸಲಾಗಿದೆ.
ಮುನ್ನಾ ಮೇಲೆ ಕಳವು ಸೇರಿ ಹಲವು ಕೇಸ್ ಗಳಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ, ಬಳಿಕ ಕೋರ್ಟ್‌ಗೆ ಹಾಜರಾಗದ ಕಾರಣ ನ್ಯಾಯಾಲಯ ಆದೇಶದನ್ವಯ ಮುನ್ನಾನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನಕ್ಕೆ ನೀಡುವುದಕ್ಕೂ ಮುಂಚೆ ನಿನ್ನೆ ಆರೋಗ್ಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಎಲ್ಲ ತಪಾಸಣೆ ಮುಗಿದ ನಂತರ ಕೋವೀಡ್ ತಪಾಸಣೆಗೆ ಕರೆದೊಯ್ದಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಮುನ್ನಾ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಬೆನ್ನಟ್ಟಿದಾಗ ಆಸ್ಪತ್ರೆಯ ಮೇಲ್ಮಡಿಯಿಂದ ಜೀಗಿದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಮುನ್ನಾಗೆ ಚಿಕಿತ್ಸೆ ನೀಡಿದರು ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ತಡರಾತ್ರಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ ಮಾಡಿ ಬಾವಿಗೆ ಬಿದ್ದು ಸಹೋದರ ಸಾವು: ಕಳೆದ ಎಂಟು ತಿಂಗಳ ಹಿಂದಷ್ಟೆ ಈತನ ಸಹೋದರ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಮೃತಪಟ್ಟಿದ್ದ. ನಗರದ ಸಾರ್ವಜನಿಕ ಉದ್ಯಾನದಲ್ಲಿ ವಾಯುವಿಹಾರಿ ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಓಡುವಾಗ ಸಾರ್ವಜನಿಕರು ಈತನ ಸಹೋದರನನ್ನು ಬೆನ್ನಟ್ಟಿದ್ದರು. ಓಡುತ್ತ ಜೆಡಿಎಸ್ ಕಚೇರಿಯ ಹತ್ತಿರದ ಬಾವಿಯಲ್ಲಿ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದ. ಈಗ ಆತನ ಸಹೋದರ ಮುನ್ನಾ ಜಿಮ್ಸ್ ಆಸ್ಪತ್ರೆ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.