ಕಲಬುರಗಿ: ಮನೆ ಕಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಮಲ್ಲು ಅಲಿಯಾಸ್ ಗೌನ್ಯಾ ಕಾಳೆ (32) ಹಾಗೂ ಶೇಖರ ಕಾಳೆ (25) ಬಂಧಿತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 249 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜೇವರ್ಗಿ ರಸ್ತೆಯ ಸಾಯಿ ಮಂದಿರ ಬಳಿ ನಾಲ್ವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ವಿಚಾರಿಸಲು ಮುಂದಾದಾಗ ಅಲ್ಲಿಂದ ಇಬ್ಬರು ಓಡಿ ಹೋಗಿದ್ದಾರೆ. ಇಬ್ಬರು ಆಪಾದಿತರು ಸಿಕ್ಕಿಬಿದ್ದಿದ್ದಾರೆ.
ವಶಕ್ಕೆ ಪಡೆದ ಇಬ್ಬರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಶಿವಶಕ್ತಿ ನಗರ, ಅಮನ್ ನಗರ, ಅಣಪೂರ್ಣೇಶ್ವರಿ ಕಾಲೋನಿ, ಕೃಷ್ಣಾ ನಗರ, ಸಿದ್ದೇಶ್ವರ ಕಾಲೋನಿ, ಆಜಾದ್ಪೂರ ರಸ್ತೆ ಹಾಗೂ ವೀರೇಂದ್ರ ಪಾಟೀಲ್ ಬಡಾವಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೆಲೆ ಮರೆಸಿಕೊಂಡ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ.