ಕಲಬುರಗಿ: ಜಿಲ್ಲೆಯ ಜನತೆಗೆ ಒಂದು ಕಡೆ ಕೊರೊನಾ ಭೀತಿ ಉಂಟಾಗಿದ್ರೆ, ಮತ್ತೊಂದೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಜನ ಗಂಟೆಗಟ್ಟಲೆ ಕಾಯ್ದರು ನೀರು ಸಿಗುತ್ತಿಲ್ಲ. ನೀರು ಬಂದ ಕೂಡಲೇ ಸಾಮಾಜಿಕ ಅಂತರವನ್ನೂ ಮರೆತು ಮುಗಿಬಿದ್ದು ನೀರನ್ನು ಹಿಡಿಯುತ್ತಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಹಗಲು-ರಾತ್ರಿ ನೀರಿಗಾಗಿ ಕಾಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನೀರು ಪೂರೈಕೆಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಬಂದ ಅಲ್ಪ-ಸ್ವಲ್ಪ ನೀರಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಮುಗಿ ಬೀಳುತ್ತಿದ್ದಾರೆ.
ಕನಿಷ್ಠ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರೋದು, ಕೊರೊನಾ ಸೋಂಕು ಹರಡಲು ಅವಕಾಶ ನೀಡಬಹುದೆಂಬ ಆತಂಕವೂ ಎದುರಾಗಿದೆ.