ಕಲಬುರಗಿ: ಆ ದಂಪತಿ ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇಬ್ಬರು ಮುದ್ದಾದ ಮಕ್ಕಳಿದ್ದರು. ಆದರೆ ಪತ್ನಿಗೆ ವಕ್ಕರಿಸಿದ ಅನಾರೋಗ್ಯ ಇಡೀ ಕುಟುಂಬದ ಖುಷಿಯನ್ನೇ ಸರ್ವನಾಶ ಮಾಡಿದೆ. ಸಾಲ ಸೂಲ ಮಾಡಿ ಆಸ್ಪತ್ರೆಗೆ ತೋರಿಸಿದರು ಆರೋಗ್ಯ ಸುಧಾರಿಸಿರಲಿಲ್ಲ. ಸಾಲ ಬೆಳೆಯಿತು ಹೊರತಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎಂದು ಜಿಗುಪ್ಸೆಗೆ ಒಳಗಾದ ವ್ಯಕ್ತಿ ಮಾಡಿದ್ದು ಮಾತ್ರ ಮನಕಲಕುವ ಕೃತ್ಯ.
ಒಂದೆಡೆ ಹೆಚ್ಚಾದ ಸಾಲ, ಇನ್ನೊಂದೆಡೆ ಸುಧಾರಿಸದ ಪತ್ನಿ ಆರೋಗ್ಯ. ಈ ಕೊರಗಿನಲ್ಲಿದ್ದ ವ್ಯಕ್ತಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನ ಬಾವಿಗೆ ತಳ್ಳಿ ನಂತರ ತಾನೂ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಆಳಂದ ಪಟ್ಟಣದ ನೇಕಾರ ಕಾಲೋನಿ ನಿವಾಸಿ ಸಿದ್ದಾರೂಡ ಮಹಾಮಲ್ಲಪ್ಪ ಅಕ್ಕ (35), ಅವರ ಪುತ್ರಿ ಶ್ರೇಯಾ (10) ಹಾಗೂ ಮಗ ಮನೀಶ್ (11) ಮೃತರು.
ಶಾಲೆಯಿಂದ ಮನೆಗೆ ಬರುವ ಬದಲಾಗಿ ಇಹಲೋಕಕ್ಕೆ: ಮಾರ್ಕೆಟ್ ಏರಿಯಾದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಿದ್ದಾರೂಡ ಉಪಜೀವನ ನಡೆಸುತ್ತಿದ್ದರು. ಪಟ್ಟಣದ ಹತ್ಯಾನ ಬಡಾವಣೆಯಲ್ಲಿರುವ ನೇತಾಜಿ ಪ್ರಾಥಮಿಕ ಶಾಲೆಯಲ್ಲಿ ಮನೀಶ್ 5ನೇ ತರಗತಿ ಹಾಗೂ ಶ್ರೇಯಾ 4ನೇ ತರಗತಿಯಲ್ಲಿ ಓದುತ್ತಿದ್ದರು.
ಎಂದಿನಂತೆ ಗುರುವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದ ಸಿದ್ದಾರೂಡ, ಸಾಯಂಕಾಲ ಮಕ್ಕಳನ್ನು ಕರೆದುಕೊಂಡು ಬರಲು ಬೈಕ್ ತೊಗೊಂಡು ಹೋಗಿದ್ದರು. ಆದರೆ ಮಕ್ಕಳನ್ನ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ. ಆಳಂದ ಪಟ್ಟಣದ ಪ್ರವಾಸಿ ಮಂದಿರ ಹಾಗೂ ಬಸ್ ಘಟಕ ಮಧ್ಯೆ ಇರುವ ಬಾವಿ ಬಳಿ ಬೈಕ್ ನಿಲ್ಲಿಸಿ ಮಕ್ಕಳ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುದ್ದಾದ ಇಬ್ಬರು ಮಕ್ಕಳನ್ನ ಮೊದಲು ಬಾವಿಗೆ ತಳ್ಳಿ ನಂತರ ತಾನೂ ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದಿಂದ ನಿರಂತರ ಶೋಧ: ಶುಕ್ರವಾರ ಬೆಳಗ್ಗೆ ಬಾವಿಯಲ್ಲಿ ಬಾಲಕನ ಶವ ತೇಲಿ ಬಂದಿದೆ. ಅಲ್ಲದೆ ಬಾವಿ ಪಕ್ಕದಲ್ಲಿಯೇ ಬೈಕ್, ಮೊಬೈಲ್, ಪಾದರಕ್ಷೆ ಇರುವದನ್ನು ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ನಂತರ ಶೋಧಕಾರ್ಯ ಮುಂದುವರೆಸಿ ಬಾಲಕಿ ಶ್ರೇಯಾಳ ಶವವನ್ನು ಕೂಡಾ ಹೊರ ತೆಗೆದಿದ್ದಾರೆ. ಆದರೆ ಬೆಳಗ್ಗೆಯಿಂದ ಇಳಿಹೊತ್ತಿನವರೆಗೂ ಶೋಧ ಕಾರ್ಯ ನಡೆಸಿದರೂ ಸಿದ್ದಾರೂಢ ಅವರ ಶವ ಒತ್ತೆಯಾಗಿರಲಿಲ್ಲ. ಹೀಗಾಗಿ ಎರಡು ಮೋಟಾರ್ ಬಳಸಿ ಬಾವಿಯಲ್ಲಿನ ನೀರು ಖಾಲಿ ಮಾಡಿದಾಗ ಸಂಜೆ 5 ಗಂಟೆ ಸುಮಾರಿಗೆ ಸಿದ್ದಾರೂಢ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ: ಶವಗಳು ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ಕಣ್ಣಂಚಿನಲ್ಲೂ ನೀರು ಚಿಮ್ಮಿದವು. ಸ್ಥಳಕ್ಕೆ ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಬಾಸು ಚೌವ್ಹಾಣ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದರು. ಮೃತನ ಪತ್ನಿ ಸಂಗೀತಾ ನೀಡಿದ ದೂರಿನ ಅನ್ವಯ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ: ಮೇಲ್ನೋಟಕ್ಕೆ ಸಾಲಬಾದೆ ಹಾಗೂ ಪತ್ನಿಯ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡು ಬಂದಿದೆ. ಪತ್ನಿ ಸಂಗೀತಾ ಅವರಿಗೆ ಹಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತಂತೆ. ಅನೇಕ ಕಡೆ ತೋರಿಸಿದ್ದರು ಚೇತರಿಕೆ ಕಂಡಿರಲಿಲ್ಲ ಎಂಬ ಕೊರಗು ಅಂಟಿಸಿಕೊಂಡು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮುಂದೆ ಆಗಾಗ ಹೇಳಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಧ್ಯಾಹ್ನ ಕೊಲೆ, ಸಂಜೆ ಅರೆಸ್ಟ್: ಸ್ಥಳ ಮಹಜರು ವೇಳೆ ಪರಾರಿ ಯತ್ನ, ಆರೋಪಿಗೆ ಗುಂಡು