ಕಲಬುರಗಿ : ಲಾಕ್‌ಡೌನ್ ಸಡಿಲಿಕೆ ಮಾಡಿ ವ್ಯಾಪಾರ, ವಹಿವಾಟಿಗೆ ಅನುಮತಿ ನೀಡಿ ಆದೇಶವನ್ನು ಜಿಲ್ಲಾಧಿಕಾರಿ ಬಿ ಶರತ್ ವಾಪಸ್ ಪಡೆದಿದ್ದಾರೆ. ಹಿಂದಿನಂತೆ ಲಾಕ್‌ಡೌನ್ ಬಿಗಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬುಧವಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಎಂದಿನಂತೆ ಬಟ್ಟೆ, ಚಿನ್ನಾಭರಣ, ಮೊಬೈಲ್, ಬೇಕರಿ, ಎಲೆಕ್ಟ್ರಾನಿಕ್, ಹೋಂ ಅಪ್ಲೈಯನ್ಸಸ್, ಬುಕ್‌ಸ್ಟಾಲ್, ಹಾರ್ಡ್ವೇರ್, ಆಟೋಮೊಬೈಲ್, ಕಂಪ್ಯೂಟರ್ ಅಂಗಡಿ ಸೇರಿ ಬಹುತೇಕ ಅಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಅಲ್ಲದೆ ಹೋಟೆಲ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಸಲ್ ನೀಡಲು ಸಹ ಅನುಮತಿ ನೀಡಲಾಗಿತ್ತು.
ಲಾಕ್‌ಡೌನ್ ಸಡಿಲಿಕೆ ನಂತರ ಜನರು ಗುಂಪು ಗುಂಪಾಗಿ ನಿಲ್ಲುವುದು, ಮಾಸ್ಕ್ ಧರಿಸದೆ ಓಡಾಡುವುದು, ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ದೃಶ್ಯ ಕಂಡುಬಂತು. ಇದು ಹೀಗೆ ಮುಂದುವರೆದರೆ ಕಲಬುರಗಿ ಜಿಲ್ಲೆ ಕೊರೊನಾ ಹಬ್ ಆಗಲಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲವನ್ನು ಗಮನಕ್ಕೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ತಾವು ನೀಡಿದ ಸಡಿಲಿಕೆ ಆದೇಶವನ್ನು 24 ಗಂಟೆಯಲ್ಲಿ ಹಿಂಪಡೆದು, ಹಿಂದಿನಂತೆ ಲಾಕ್‌ಡೌನ್ ಮುಂದುವರೆಸಲು ಮರು ಆದೇಶ ಹೊರಡಿಸಿದ್ದಾರೆ.
ಶುಕ್ರವಾರದಿಂದ ದಿನಸಿ ಅಂಗಡಿ, ತರಕಾರಿ, ಹಣ್ಣು ಹೊರೆತುಪಡಿಸಿ ಎಲ್ಲಾ ಅಂಗಡಿಗಳು ಬಂದ್ ಆಗಲಿವೆ. ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ವಾಹನಗಳು ಮತ್ತೆ ಸೀಜ್ ಆಗಲಿವೆ.