ಕಲಬುರಗಿ: 'ವೈದ್ಯೋ ನಾರಾಯಣೋ ಹರಿ' ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಇಲ್ಲೊಬ್ಬ ವೈದ್ಯರಿದ್ದಾರೆ. ಕೊರೊನಾ ಶುರುವಾದ ದಿನಗಳಿಂದ ತನ್ನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಂದ ಇವರು ಬಿಡಿಗಾಸನ್ನೂ ಪಡೆಯುತ್ತಿಲ್ಲ. ಕೊರೊನಾ ಹಾವಳಿ ಮುಗಿಯುವವರೆಗೂ ಬಡ ರೋಗಿಗಳ ಉಚಿತ ಸೇವೆ ಮಾಡುವುದಾಗಿ ಇವರು ಶಪಥ ತೆಗೆದುಕೊಂಡಿದ್ದಾರೆ. ಈ ಮೂಲಕ ಅದೆಷ್ಟೋ ಬಡ ರೋಗಿಗಳ ಪಾಲಿಗೆ ದೇವರಾಗಿದ್ದಾರೆ.
ಡಾ. ಚಾಂದ್ ಪಾಷಾ ಕಾಳಗಿ. ಇವರು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಖಾಸಗಿ ದವಾಖಾನೆ ನಡೆಸುತ್ತಿದ್ದಾರೆ. ಕೊರೊನಾ ಬಂದಾಗಿನಿಂದ ತನ್ನ ಬಳಿ ಬರುವ ಯಾವ ರೋಗಿಯಿಂದಲೂ ಇವರು ಒಂದು ರೂಪಾಯಿ ಹಣವನ್ನೂ ತೆಗೆದುಕೊಂಡಿಲ್ಲ. ಮೈ ಹುಷಾರಿಲ್ಲ ಎಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಇವರು ಉಚಿತ ಚಿಕಿತ್ಸೆ ನೀಡುತ್ತಾರೆ. ಅವರ ಬಳಿ ಹಣವಿಲ್ಲವೆಂದರೆ ತಾವೇ ಅಲ್ಪಸ್ವಲ್ಪ ಹಣ ನೀಡಿ ಕಳುಹಿಸುವ ಉದಾರತೆಯನ್ನೂ ತೋರಿದ್ದಾರಂತೆ.
ಜ್ವರ, ಕೆಮ್ಮು, ನೆಗಡಿ ಹೀಗೆ ಇತರೆ ಖಾಯಿಲೆಗಳ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮೊದಲು ಸ್ಯಾನಿಟೈಸರ್, ಮಾಸ್ಕ್ ನೀಡಿ ದವಾಖಾನೆ ಒಳಗಡೆ ಬರಮಾಡಿಕೊಳ್ಳುತ್ತಾರೆ. ನಂತರ ಯಾವುದೇ ಭಯವಿಲ್ಲದೆ ರೋಗಿಗಳನ್ನು ಮುಟ್ಟಿ ಪರೀಕ್ಷಿಸಿ ಇವರು ಚಿಕಿತ್ಸೆ ನೀಡುತ್ತಾರೆ.
ಎಷ್ಟೋ ಮಂದಿ ಧನದಾಹಿ ವೈದ್ಯರು ಕೊರೊನಾ ಸಂದರ್ಭದಲ್ಲಿ ತಮ್ಮ ವೃತ್ತಿಯನ್ನೇ ದಂಧೆ ಮಾಡಿಕೊಂಡು ರೋಗಿಗಳಿಂದ ಹಣ ಪೀಕಿದ ನಿದರ್ಶನಗಳಿವೆ. ಇವರ ನಡುವೆ, ಡಾ. ಚಾಂದ್ ಪಾಷಾ ಮಾನವೀಯ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡುತ್ತಾ ವಿಶೇಷ ವ್ಯಕ್ತಿಯಾಗಿ ಕಾಣುತ್ತಾರೆ.
ಸೇಡಂ ಪಟ್ಟಣದ ಕೊತ್ತಲ ಬಸವೇಶ್ವರ ದೇವಸ್ಥಾನದ ಬಳಿ ಇರುವ ಇವರ ಆಸ್ಪತ್ರೆಗೆ ದಿನಂಪ್ರತಿ ನೂರಾರು ರೋಗಿಗಳು ಬರುತ್ತಾರೆ. ಇವರ ಸತ್ಕಾರ್ಯಕ್ಕೆ ಸೇಡಂ ಪಟ್ಟಣದ ಜನ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.