ಇಸ್ಲಾಮಾಬಾದ್, ಪಾಕಿಸ್ತಾನ: ಪಾಕಿಸ್ತಾನ ಭಯೋತ್ಪಾದಕ ದಾಳಿಯಿಂದ ನಲುಗಿ ಹೋಗಿದೆ. ಕಳೆದ ನವೆಂಬರ್‌ನಲ್ಲಿ ಪಾಕಿಸ್ತಾನದಾದ್ಯಂತ ನಡೆದ ಸರಣಿ ಭಯೋತ್ಪಾದಕ ದಾಳಿ ಮತ್ತು ಘರ್ಷಣೆಗಳಲ್ಲಿ 68 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 245 ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಾಬಾದ್ ಮೂಲದ ಥಿಂಕ್ ಟ್ಯಾಂಕ್‌ನ ವರದಿ ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (ಪಿಐಸಿಎಸ್ಎಸ್) ಭಾನುವಾರ ಬಿಡುಗಡೆ ಮಾಡಿದೆ ವರದಿಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಲಾಗಿದೆ.
ಮೃತಪಟ್ಟವರಲ್ಲಿ 92 ನಾಗರಿಕರು, 108 ಉಗ್ರಗಾಮಿಗಳು ಮತ್ತು 54 ಭದ್ರತಾ ಸಿಬ್ಬಂದಿ ಸೇರಿದಂತೆ 245 ಸಾವು ಸಂಭವಿಸಿವೆ. ಆಗಸ್ಟ್‌ನ ನಂತರ ನವೆಂಬರ್‌ನಲ್ಲಿ ಅತಿ ಹೆಚ್ಚು ದಾಳಿಗಳು ನಡೆದಿದ್ದು, ಈ ವರ್ಷದ ಎರಡನೇ ಮಾರಣಾಂತಿಕ ತಿಂಗಳಾಗಿದೆ.
ಹೆಚ್ಚುವರಿಯಾಗಿ 104 ಭದ್ರತಾ ಸಿಬ್ಬಂದಿ ಮತ್ತು 119 ನಾಗರಿಕರು ಸೇರಿದಂತೆ ಘರ್ಷಣೆ ಮತ್ತು ಬಾಂಬ್ ಸ್ಫೋಟಗಳಲ್ಲಿ 257 ಜನರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಭಯೋತ್ಪಾದಕ ದಾಳಿಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಉಗ್ರರ ದಾಳಿಯಲ್ಲಿ 54 ಭದ್ರತಾ ಸಿಬ್ಬಂದಿ, 50 ನಾಗರಿಕರು ಮತ್ತು 27 ಭಯೋತ್ಪಾದಕರು ಸೇರಿದಂತೆ 131 ಸಾವುಗಳು ಸಂಭವಿಸಿವೆ ಎಂದು ವರದಿ ವಿವರಿಸಿದೆ. ನವೆಂಬರ್‌ನಲ್ಲಿ ದೇಶಾದ್ಯಂತ ಉಗ್ರಗಾಮಿ ಚಟುವಟಿಕೆ ಹೆಚ್ಚಳ ಆಗಿರುವುದನ್ನು ವರದಿಯಲ್ಲಿ ಹೇಳಲಾಗಿದೆ.
ಖೈಬರ್ ಕಣಿವೆಯ ಪಖ್ತುಂಖ್ವಾ ಪ್ರಾಂತ್ಯ ಅತ್ಯಂತ ಪೀಡಿತ ಪ್ರದೇಶವಾಗಿದ್ದು, 50 ಭಯೋತ್ಪಾದಕ ದಾಳಿಗಳು 71 ಸಾವುಗಳು ಮತ್ತು 85 ಮಂದಿಯ ಗಂಭೀರವಾದ ಗಾಯಗಳಿಗೆ ಕಾರಣವಾಗಿವೆ. ಕುರ್ರಂ ಜಿಲ್ಲೆಯು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಬುಡಕಟ್ಟು ಘರ್ಷಣೆಗೆ ಸಾಕ್ಷಿಯಾಗಿದೆ. 120 ಕ್ಕೂ ಹೆಚ್ಚು ಜನರು ಇಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ಲಾಮಾಬಾದ್ ಥಿಂಕ್ ಟ್ಯಾಂಕ್ ಅನ್ನು ಉಲ್ಲೇಖಿಸಿ ಡಾನ್ ಹೇಳಿದೆ.
ಇದಲ್ಲದೇ ವರದಿಯ ಪ್ರಕಾರ ಬಲೂಚಿಸ್ತಾನ್ ಪ್ರಾಂತ್ಯದಲ್ಲೂ 20 ಭಯೋತ್ಪಾದಕ ದಾಳಿಗಳಾದ ಬಗ್ಗೆ ವರದಿ ಆಗಿದೆ. ಈ ಪರಿಣಾಮವಾಗಿ 26 ಭದ್ರತಾ ಸಿಬ್ಬಂದಿ 25 ನಾಗರಿಕರು ಮತ್ತು ಒಂಬತ್ತು ಭಯೋತ್ಪಾದಕರು ಸೇರಿದಂತೆ 60 ಮಂದಿ ಸಾವನ್ನಪ್ಪಿದ್ದಾರೆ. ನವೆಂಬರ್‌ನಲ್ಲಿ ನಡೆದ 127 ಭಯೋತ್ಪಾದಕರ ಸಾವುಗಳು ಫೆಬ್ರವರಿ 2017 ರಿಂದ ಇಲ್ಲಿವರೆಗೂ 148 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ವರದಿ ಹೇಳಿದೆ. ಪಾಕಿಸ್ತಾನಿ ಭದ್ರತಾ ಪಡೆಗಳು ಸಹ ದೊಡ್ಡ ನಷ್ಟವನ್ನು ಅನುಭವಿಸಿವೆ. ಈ ದಾಳಿಗಳಲ್ಲಿ 68 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ
ಇದನ್ನು ಓದಿ: ಪಾಕಿಸ್ತಾನದ ಎರಡು ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ: ಮೃತರ ಸಂಖ್ಯೆ 124ಕ್ಕೆ ಏರಿಕೆ