ಕಲಬುರಗಿ: ರೈತರೊಬ್ಬರ ಪಹಣಿಯ ಹೆಸರು ಬದಲಾಯಿಸಲು ಲಂಚ ಪಡೆಯುತ್ತಿದ್ದಾಗ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಯಡ್ರಾಮಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಗ್ರಾಮಲೆಕ್ಕಾಧಿಕಾರಿ ಜಯಶ್ರೀ ಸಂತೋಷ ಕೊಡೆಕಲ್ ರೈತರೊಬ್ಬರಿಂದ 7 ಸಾವಿರ ರೂ. ಹಣ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಣಮೇಶ್ವರ ಗ್ರಾಮದ ರೈತರು ತಮ್ಮ ಪಹಣಿಯ ಹೆಸರು ಬದಲಾವಣೆ ಮಾಡಲು ಪ್ರತಿನಿತ್ಯ ಅಲೆದರೂ ಕೂಡ ಈ ಗ್ರಾಮಲೆಕ್ಕಾಧಿಕಾರಿ ಕೆಲಸ ಮಾಡಿರಲಿಲ್ಲ ಎನ್ನಲಾಗ್ತಿದೆ.
ಈ ಗ್ರಾಮಲೆಕ್ಕಾಧಿಕಾರಿಯೇ ಪಹಣಿಯ ವಿಷಯ ನಿರ್ವಾಹಕಿಯಾಗಿದ್ದರಿಂದ ಹಲವು ದಿನಗಳಿಂದ ರೈತನಿಗೆ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಕೊನೆಗೆ ಬೇಸತ್ತ ರೈತ ಎಸಿಬಿಗೆ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಎಸಿಬಿ ಡಿವೈಎಸ್ಪಿ ಮಹೇಶ್ ಮೇಘಣ್ಣವರ ನೇತೃತ್ವದ ತಂಡ ದಾಳಿ ಮಾಡಿ ಭ್ರಷ್ಟ ಅಧಿಕಾರಿಯನ್ನು ಬಂಧಿಸಿದೆ.