ಕಲಬುರಗಿ : ಬಿಜೆಪಿಯಲ್ಲಿ ಲಾಬಿ ನಡೆಸುವುದಾಗಲಿ, ಗುಂಪುಗಾರಿಕೆ ಮಾಡುವದಾಗಲಿ ಇಲ್ಲ, ಬಿಜೆಪಿಗೆ ಇದು ಸೂಟ್ ಕೂಡಾ ಆಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ನಡೆದಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಶಾಸಕರ ಪ್ರತ್ಯೇಕ ಸಭೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಚರ್ಚೆ ಮಾಡುವುದರಲ್ಲಿ ತಪ್ಪೇನಿಲ್ಲ. ಹಲವು ಶಾಸಕರು ಸಭೆ ಮಾಡಿ ಸಚಿವ ಸ್ಥಾನದ ಅಪೇಕ್ಷೆ ಇಟ್ಟಿದ್ದಾರೆ. ಅಷ್ಟಕ್ಕೆ ತಪ್ಪು ಎನ್ನಲು ಆಗದು, ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಂಡರೆ ತಪ್ಪಾಗುತ್ತದೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದರು.
ವಿಧಾನ ಪರಿಷತ್ ಸದಸ್ಯರ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ಇಷ್ಟರಲ್ಲಿಯೇ ಕೋರ್ ಕಮಿಟಿ ಸಭೆ ನಡೆಯಲಿದೆ. ಬಿಜೆಪಿಯಲ್ಲಿ ವಲಸಿಗರು, ಮೂಲ ಬಿಜೆಪಿಗರು ಎನ್ನುವ ಪ್ರಶ್ನೆಯಿಲ್ಲ, ಯಾರಿಗೆ ಸ್ಥಾನ ಕೊಡಬೇಕೆಂಬುದನ್ನು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.